ಸಂಸತ್ತನ್ನೇ ವಿಸರ್ಜಿಸಿದ ಲಂಕಾ ಅಧ್ಯಕ್ಷ: ಜನವರಿ 5ರಂದು ಮಧ್ಯಂತರ ಚುನಾವಣೆ

ಕೊಲಂಬೊ, ನ. 10: ಅತ್ಯಂತ ವಿವಾದಾಸ್ಪದ ಕ್ರಮವೊಂದರಲ್ಲಿ, ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಶುಕ್ರವಾರ ಸಂಸತ್ತನ್ನು ವಿಸರ್ಜಿಸಿದ್ದಾರೆ ಹಾಗೂ ಜನವರಿ 5ರಂದು ಮಧ್ಯಂತರ ಚುನಾವಣೆ ನಡೆಯುವುದಾಗಿ ಘೋಷಿಸಿದ್ದಾರೆ.
ಹೊಸದಾಗಿ ಚುನಾವಣೆ ನಡೆದರೆ, ತನ್ನ ಆಯ್ಕೆಯ ಪ್ರಧಾನಿ ಅಭ್ಯರ್ಥಿಗೆ ಬೆಂಬಲ ದೊರೆಯುವುದು ಎಂಬ ನಿರೀಕ್ಷೆಯಿಂದ ಅಧ್ಯಕ್ಷರು ಈ ಜೂಜಿಗೆ ಇಳಿದಿದ್ದಾರೆ ಎಂದು ಸಚಿವರೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
ಅಧ್ಯಕ್ಷರು ಕಳೆದ ತಿಂಗಳು, ಪ್ರಧಾನಿಯಾಗಿದ್ದ ರನಿಲ್ ವಿಕ್ರಮೆಸಿಂಘೆಯನ್ನು ವಜಾಗೊಳಿಸಿ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸ ಅವರನ್ನು ಪ್ರಧಾನಿಯಾಗಿ ನೇಮಿಸಿದ್ದರು. ಆದರೆ, ಅಧ್ಯಕ್ಷರ ಈ ಕ್ಷಿಪ್ರಕ್ರಾಂತಿಯ ವಿರುದ್ಧ ಬಂಡೆದ್ದ ವಿಕ್ರಮೆಸಿಂಘೆ, ಅಧಿಕಾರದಿಂದ ಕೆಳಗಿಳಿಯಲು ಒಪ್ಪಲಿಲ್ಲ. ಈ ಹಿನ್ನೆಲೆಯಲ್ಲಿ ಹಿಂದೂಮಹಾ ಸಾಗರದ ದ್ವೀಪ ರಾಷ್ಟ್ರದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿತ್ತು.
ಅಧ್ಯಕ್ಷರು ಸಂಸತ್ತನ್ನೂ ನವೆಂಬರ್ 14ರವರೆಗೆ ಅಮಾನತಿನಲ್ಲಿಟ್ಟಿದ್ದರು. ಮುಂದೆ ಸಂಸತ್ತಿನ ಅಧಿವೇಶನ ನಡೆದಾಗ ತನ್ನ ಸರಕಾರ ಬಹುಮತ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಷ್ಟ ಎಂಬುದನ್ನು ಅರಿತ ಸಿರಿಸೇನ 225 ಸದಸ್ಯ ಬಲದ ಸಂಸತ್ತನ್ನೇ ವಿಸರ್ಜಿಸಿದ್ದಾರೆ.
ಸಾಮಾನ್ಯ ಪರಿಸ್ಥಿತಿಯಲ್ಲಿ ಶ್ರೀಲಂಕಾದಲ್ಲಿ 2020ಕ್ಕಿಂತ ಮೊದಲು ಚುನಾವಣೆ ನಡೆಯುವಂತಿಲ್ಲ.
ಪಕ್ಷಾಂತರಕ್ಕೆ ಕೋಟ್ಯಂತರ ರೂಪಾಯಿ ಆಮಿಷ: ಪ್ರತಿಪಕ್ಷ ಸಂಸದರ ಆರೋಪ
ಪ್ರಧಾನಿ ರನಿಲ್ ವಿಕ್ರಮೆಸಿಂಘೆಯನ್ನು ವಜಾಗೊಳಿಸಿದ ಬಳಿಕ, ಪ್ರತಿಪಕ್ಷದ ಸಂಸದರನ್ನು ಖರೀದಿಸುವುದಕ್ಕೆ ಹೆಚ್ಚಿನ ಸಮಯಾವಕಾಶವನ್ನು ಪಡೆಯಲು ಸಿರಿಸೇನ ಸಂಸತ್ತನ್ನು ಅಮಾನತಿನಲ್ಲಿಟ್ಟರು ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಅದು ಸಾಧ್ಯವಿಲ್ಲ ಎನ್ನುವುದು ಮನವರಿಕೆಯಾದ ಬಳಿಕ, ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಳ್ಳುವ ಪ್ರಯತ್ನವಾಗಿ ಸಂಸತ್ತನ್ನೇ ವಿಸರ್ಜಿಸಿದ್ದಾರೆ ಎಂದು ಅವು ಹೇಳಿವೆ.
ಸಿರಿಸೇನರ ಬಣಕ್ಕೆ ಹಾರಲು ತಮಗೆ ಕೋಟ್ಯಂತರ ರೂಪಾಯಿ ಮೊತ್ತದ ಆಮಿಷಗಳನ್ನು ಒಡ್ಡಲಾಗಿತ್ತು ಎಂಬುದಾಗಿ ಹಲವಾರು ಪ್ರತಿಪಕ್ಷ ಸಂಸದರು ಆರೋಪಿಸಿದ್ದಾರೆ.
ಕನಿಷ್ಠ 8 ಸಂಸದರು ಈಗಾಗಲೇ ಅಧ್ಯಕ್ಷರ ಬಣಕ್ಕೆ ಹಾರಿದ್ದಾರೆ.
ಅಮೆರಿಕ, ಪಾಶ್ಚಾತ್ಯ ದೇಶಗಳ ಖಂಡನೆ
ಶ್ರೀಲಂಕಾ ಸಂಸತ್ತನ್ನು ವಿಸರ್ಜಿಸುವ ಅಧ್ಯಕ್ಷ ಮೈತ್ರಿಪಾಲ ಸಿರಿಸೇನರ ಕ್ರಮವನ್ನು ಅಮೆರಿಕ, ಬ್ರಿಟನ್ ಸೇರಿದಂತೆ ಪಾಶ್ಚಾತ್ಯ ದೇಶಗಳು ಟೀಕಿಸಿವೆ.
‘‘ಶ್ರೀಲಂಕಾ ಸಂಸತ್ತನ್ನು ವಿಸರ್ಜಿಸಲಾಗುವುದು ಎಂಬ ಸುದ್ದಿಯಿಂದ ಅಮೆರಿಕ ಕಳವಳಗೊಂಡಿದೆ. ಇದು ದೇಶದ ಸಾಂವಿಧಾನಿಕ ಬಿಕ್ಕಟ್ಟನ್ನು ಮತ್ತಷ್ಟು ಬಿಗಡಾಯಿಸಿದೆ’’ ಎಂಬುದಾಗಿ ಅಮೆರಿಕದ ದಕ್ಷಿಣ ಮತ್ತು ಮಧ್ಯ ಏಶ್ಯ ವ್ಯವಹಾರಗಳ ಬ್ಯೂರೋ ಟ್ವೀಟ್ ಮಾಡಿದೆ.
ಬ್ರಿಟನ್, ಕೆನಡ ಮತ್ತು ಆಸ್ಟ್ರೇಲಿಯಗಳೂ ಅಧ್ಯಕ್ಷ ಸಿರಿಸೇನರ ಕ್ರಮವನ್ನು ಟೀಕಿಸಿವೆ.







