ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಕ್ರೀಯಾಶೀಲ ತಂತ್ರಜ್ಞರಾಗುವಂತೆ ಡಾ.ಎನ್.ವಿನಯ ಹೆಗ್ಡೆ ಕರೆ
ಎನ್‌ಐಟಿಕೆ 16ನೆ ಘಟಿಕೋತ್ಸವ

ಮಂಗಳೂರು, ನ.10: ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಕ್ರೀಯಾಶೀಲ ತಂತ್ರಜ್ಞರಾಗುವಂತೆ ಯುವ ಪದವಿಧರರಿಗೆ ನಿಟ್ಟೆ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಎನ್.ವಿನಯ ಹೆಗ್ಡೆ ಕರೆ ನೀಡಿದರು.
ಸುರತ್ಕಲ್‌ನ ಎನ್ ಐಟಿ ಕೆ ಯ 16ನೆ ಘಟಿಕೋತ್ಸವದಲ್ಲಿಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ದೇಶದಲ್ಲಿ 50,000 ಕಾಲೇಜುಗಳಿವೆ, 800 ವಿಶ್ವ ವಿದ್ಯಾನಿಲಯಗಳಿವೆ ಆದರೆ ಪದವಿಧರರಾಗಲು ನೋಂದಣೆಯಾಗುವವರು ಸಂಖ್ಯೆ ಶೇ 30ನ್ನು ದಾಟಿಲ್ಲ. ಈ ಪೈಕಿ ಗ್ರಾಮೀಣ ಪ್ರದೇಶದಲ್ಲಿ ಈ ಅವಕಾಶ ಇನ್ನೂ ಕಡಿಮೆ .ಈ ಹಿನ್ನೆಲೆಯಲ್ಲಿ ಎನ್‌ಐಟಿಕೆಯಂತಹ ದೇಶದ ಪ್ರತಿಷ್ಠಿತ ಸಂಸ್ಥೆಯಲ್ಲಿ ಪದವಿಧರರಾಗುವುದು ಇನ್ನೂ ಕೆಲವರ ಕನಸು. ಇಂತಹ ಸಂದರ್ಭದಲ್ಲಿ ಈ ಅವಕಾಶವನ್ನು ಪಡೆದ ಯುವ ಪದವಿಧರರು ದೇಶದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಹೊಣೆಗಾರಿಕೆಯಿದೆ. ಯುವ ತಂತ್ರಜ್ಞರು ದೇಶದ ಎಲ್ಲಾ ಜನರಿಗೂ ಅಭಿವೃದ್ಧಿಯ ಫಲವನ್ನು ನೀಡುವಂತಹ ಕ್ರೀಯಾಶೀಲರಾಗಬೇಕು. ಅದಕ್ಕಾಗಿ ವಿಶ್ವ ವಿದ್ಯಾನಿಲಯಗಳಲ್ಲಿ ಕಲಿತ ಶಿಕ್ಷಣ ಮಾತ್ರ ಸಾಕಾಗುವುದಿಲ್ಲ. ನಿರಂತರವಾದ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ವಿಶ್ವವಿದ್ಯಾನಿಲಯಗಳು ಉದ್ಯಮ ಕ್ಷೇತ್ರದ ಆಗು ಹೋಗುಗಳ ಬಗ್ಗೆ ತಿಳುವಳಿಕೆ ಹೊಂದಿರಬೇಕು. ವಿದ್ಯಾರ್ಥಿಗಳು ಮತ್ತು ಉದ್ಯಮ ಕ್ಷೇತ್ರದ ನಡುವೆ ಸಂವಹನದ ಕೆಲಸ ಪ್ರಸಕ್ತ ಪರಿಸ್ಥಿತಿಯಲ್ಲಿ ಹಮ್ಮಿಕೊಳ್ಳಬೇಕಾಗಿದೆ. ಇದರಿಂದ ವಿದ್ಯಾರ್ಥಿಗಳ ಜ್ಞಾನ ಇನ್ನಷ್ಟು ವಿಸ್ತಾರವಾಗುತ್ತದೆ ಎಂದು ವಿನಯ ಹಗ್ಡೆ ತಿಳಿಸಿದರು.
ಜಾಗತೀಕರಣದ ಬಳಿಕ ಆರ್ಥಿಕ ಪರಿಸ್ಥಿತಿಯಲ್ಲಿ ಮಾರುಕಟ್ಟೆಯ ಶಕ್ತಿಗಳು ಪ್ರಬಲ ಪಾತ್ರ ವಹಿಸುತ್ತಿವೆ. ಈ ಸನ್ನಿವೇಶಗಳನ್ನುರ್ಥ ಮಾಡಿಕೊಂಡು ಅದನ್ನು ಎದುರಿಸುವ ವ್ಯಕ್ತಿಗಲು ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಎನ್‌ಐಟಿಕೆಯ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಬಲವೀರ ರೆಡ್ಡಿ ವಹಿಸಿ ಮಾತನಾಡುತ್ತಾ, ತಂತ್ರಜ್ಞಾನದಿಂದ ಕೂಡಿದ ಉದ್ಯಮ ಶೀಲತೆಗೆ ಹೆಚ್ಚಿನ ಗಮನಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಾಗತೀಕರಣದ ಯುಗದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಸ್ಫರ್ಧಾತ್ಮಕ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರಿ ಕೆಲಸವನ್ನು ನಂಬಿ ಪ್ರತಿಯೊಬ್ಬ ಪದವಿಧರನು ಕೂರುವಂತಿಲ್ಲ. ಸ್ವಂತ ಉದ್ಯಮ ಸ್ಥಾಪನೆಗೆ ಗಮನಹರಿಸಬೇಕಾಗಿದೆ. ಕೌಶಲ್ಯ ವೃದ್ಧಿಗೆ ವಿಶ್ವ ವಿದ್ಯಾನಿಲಯಗಳು ಹೆಚ್ಚಿನ ಗಮನಹರಿಸುವಂತಾಗಬೇಕಾಗಿದೆ. 21 ಶತಮಾನ ಭಾರತದ ಯುಗ ಎನ್ನುವ ಮಾತುಗಳನ್ನು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ನೆನಪಿಸಿಕೊಟ್ಟಿದ್ದಾರೆ. ದೇಶದ ಪ್ರಧಾನಿ ನರೇಂದ್ರ ದಾಮೋದರ ಮೋದಿ ಅಂದಂತೆ ದೇಶದ ಬೃಹತ್ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಭಾರತ ಅಭಿವೃದ್ಧಿ ಹೋಂದಿದ ರಾಷ್ಟ್ರವಾಗಿ ಜಾಗತಿಕ ಮಟ್ಟದಲ್ಲಿ ಬೆಳೆಯಬೇಕಾಗಿದೆ ಎಂದರು. ಈ ನಿಟ್ಟಿನಲ್ಲಿ ಯುವ ತಂತ್ರಜ್ಞರು ತಾಂತ್ರಿಕತೆಯೊಂದಿಗೆ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಲು ಮುಂದೆ ಬರಬೇಕು ಎಂದು ಅವರು ಕರೆ ನೀಡಿದರು.
ಘಟಿಕೋತ್ಸವ ಸಮಾರಂಭದಲ್ಲಿ ಎನ್‌ಐಟಿಕೆ ನಿರ್ದೇಶಕ ಪ್ರೊ.ಕೆ. ಉಮಾ ಮಹೇಶ್ವರ ರಾವ್ ಸ್ವಾಗತಿಸಿದರು. ಆಡಳಿತ ಮಂಡಳಿಯ ಸದಸ್ಯರು ವಿವಿಧ ವಿಭಾಗಗಳ ಡೀನ್‌ಗಳು ಉಪಸ್ಥಿತರಿದ್ದರು. 1581ಪದವಿಧರರಿಗೆ ಎನ್‌ಐಟಿಕೆಯ ಎಂಟೆಕ್ ಪದವಿ ನೀಡಲಾಯಿತು. 39 ಪದವಿಧರರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.







