ಶ್ರೀರಂಗಪಟ್ಟಣ: ಟಿಪ್ಪು ಸಮಾಧಿಗೆ ಶಾಸಕ ರವೀಂದ್ರ ಪುಷ್ಪಾರ್ಚನೆ

ಶ್ರೀರಂಗಪಟ್ಟಣ, ನ.10: ಟಿಪ್ಪು ಜಯಂತಿ ಹಿನ್ನಲೆಯಲ್ಲಿ ಗುಂಬಜ್ ನಲ್ಲಿರುವ ಹಜರತ್ ಟಿಪ್ಪು ಸಮಾಧಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.
ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ನಂತರ ಗುಂಬಜ್‍ನಲ್ಲಿದ್ದ ಟಿಪ್ಪು ಸಮಾಧಿಗೆ ತೆರಳಿ ಪುಷ್ಪಾರ್ಚನೆ ಮಾಡಿದರು. ತಹಶೀಲ್ದಾರ್ ನಾಗೇಶ್ ಸೇರಿದಂತೆ ಮತ್ತಿತರರ ಮುಸ್ಲಿಂ ಮುಖಂಡರು ಹಾಜರಿದ್ದರು.
ಟಿಪ್ಪು ಜಯಂತಿ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಿದ್ದು, ಶ್ರೀರಂಗಪಟ್ಟಣದ ಗುಂಬಜ್‍ನಲ್ಲಿರುವ ಟಿಪ್ಪು ಸಮಾಧಿಯ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಸುತ್ತಮುತ್ತ ಸಿಸಿ ಕ್ಯಾಮೆರಾ, ವಿಡಿಯೋ ಚಿತ್ರೀಕರಣ, ಬ್ಯಾರಿಕೇಡ್ ಅಳವಡಿಸಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಎಚ್ಚರಿಕೆ ವಹಿಸಲಾಗಿತ್ತು. ಮೆರವಣಿಗೆ, ಘೋಷಣೆ, ರ್ಯಾಲಿಗೆ ನಿರ್ಬಂಧ ವಿಧಿಸಲಾಗಿತ್ತು.
ಮುಸ್ಲಿಂ ಯುವಕರಿಂದ ಘೋಷಣೆ:
ಕೆಲ ಮುಸ್ಲಿಂ ಯುವಕರು ಟಿಪ್ಪು ಸಮಾಧಿ ಬಳಿ ಟಿಪ್ಪು ಪರ ಜೈಕಾರ ಕೂಗಿದರು. ತಂಡೋಪ ತಂಡವಾಗಿ ವಿವಿಧೆಡೆಗಳಿಂದ ಆಗಮಿಸಿದ ಮುಸ್ಲಿಂ ಯುವಕರು ಟಿಪ್ಪು ಸಮಾಧಿಗೆ ತೆರಳಿ ಜೈಕಾರ ಕೂಗಿ ಪುಷ್ಪಾರ್ಚನೆ ಮಾಡಿದರು.





