ಎಂಥ ಮೂರ್ಖ ಪ್ರಶ್ನೆಯಿದು: ಪತ್ರಕರ್ತನ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಟ್ರಂಪ್

ವಾಶಿಂಗ್ಟನ್, ನ. 10: ‘ಪವಿತ್ರ’ ಶ್ವೇತಭವನದಲ್ಲಿ ಹೆಚ್ಚಿನ ಗೌರವವನ್ನು ತೋರಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಪತ್ರಕರ್ತರಿಗೆ ಸೂಚನೆ ನೀಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ, ಪತ್ರಕರ್ತರೊಬ್ಬರ ‘ಮೂರ್ಖ’ ಪ್ರಶ್ನೆಯೊಂದಕ್ಕೆ ಉತ್ತರಿಸಲು ನಿರಾಕರಿಸಿದ್ದಾರೆ.
ಬುಧವಾರ ಸಿಎನ್‌ಎನ್ ವರದಿಗಾರರೊಬ್ಬರನ್ನು ‘ಭಯಾನಕ ವ್ಯಕ್ತಿ’ ಎಂಬುದಾಗಿ ಬಣ್ಣಿಸಿ ಅವರ ಶ್ವೇತಭವನ ಪ್ರವೇಶವನ್ನು ರದ್ದುಪಡಿಸಿದ ಎರಡು ದಿನಗಳ ಬಳಿಕ, ಟ್ರಂಪ್ ಮತ್ತೊಮ್ಮೆ ಪತ್ರಕರ್ತರೊಂದಿಗೆ ಜಗಳಕ್ಕಿಳಿದರು.
ಟ್ರಂಪ್‌ರ 2016ರ ಚುನಾವಣಾ ಪ್ರಚಾರ ತಂಡವು ರಶ್ಯದ ಏಜಂಟರೊಂದಿಗೆ ಶಾಮೀಲಾಗಿತ್ತು ಎಂಬ ಆರೋಪದ ಬಗ್ಗೆ ನಡೆಯುತ್ತಿರುವ ಸ್ಫೋಟಕ ತನಿಖೆಯನ್ನು ನಿಮ್ಮ ನೂತನ ಅಟಾರ್ನಿ ಜನರಲ್ ಸ್ಥಗಿತಗೊಳಿಸಬೇಕೆಂದು ನೀವು ಬಯಸುವಿರೇ ಎಂಬ ಪ್ರಶ್ನೆಯನ್ನು ಸಿಎನ್‌ಎನ್‌ನ ಇನ್ನೋರ್ವ ವರದಿಗಾರ ಆ್ಯಬಿ ಫಿಲಿಪ್ ಕೇಳಿದರು.
ಈ ಪ್ರಶ್ನೆಗೆ ಉತ್ತರಿಸಲು ಟ್ರಂಪ್ ನಿರಾಕರಿಸಿದರು.
‘‘ಇದು ಎಂಥ ಮೂರ್ಖ ಪ್ರಶ್ನೆ. ಆದರೆ ನಾನು ನಿಮ್ಮನ್ನು ತುಂಬಾ ಗಮನಿಸುತ್ತಿದ್ದೇನೆ. ನೀವು ತುಂಬಾ ಮೂರ್ಖ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ’’ ಎಂದು ಹೇಳಿದ ಟ್ರಂಪ್ ಹೊರನಡೆದರು.







