ಪಾಕಿಸ್ತಾನದ ಸ್ನೈಪರ್ ದಾಳಿಗೆ ಯೋಧ ಸಾವು

ಹೊಸದಿಲ್ಲಿ, ನ. 10: ಜಮ್ಮು ಹಾಗೂ ಕಾಶ್ಮೀರದ ಸುಂದರಬನಿ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದಿಂದ ಮತ್ತೊಮ್ಮೆ ಕದನ ವಿರಾಮ ಉಲ್ಲಂಘನೆ ನಡೆದಿದ್ದು, ಸ್ನೈಪರ್ (ಮರೆಯಿಂದ ಗುಂಡು ಹಾರಿಸಿ ಹತ್ಯೆ ನಡೆಸುವುದು) ಗುಂಡಿನ ದಾಳಿಗೆ ಸೇನೆಯ ಯೋಧನೋರ್ವ ಮೃತಪಟ್ಟಿದ್ದಾರೆ.
‘‘ಸುಂದರಬನಿ ವಲಯದಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ. ಶನಿವಾರ ರಾತ್ರಿ 9.30ರ ಹೊತ್ತಿಗೆ ಪಾಕಿಸ್ತಾನದ ಸ್ನೈಪರ್ ಅಪ್ರಚೋದಿತ ಗುಂಡಿನ ದಾಳಿ ನಡೆಸಿದರು. ಈ ದಾಳಿಯಲ್ಲಿ ಯೋಧನೋರ್ವ ಮೃತಪಟ್ಟಿದ್ದಾನೆ’’ ಎಂದು ಸೇನಾ ಅಧಿಕಾರಿ ಒಬ್ಬರು ತಿಳಿಸಿದ್ದಾರೆ. ಶುಕ್ರವಾರ ಸಂಜೆ ಜಮ್ಮು ಜಿಲ್ಲೆಯ ಅಖ್ನೂರ್ ವಲಯದಲ್ಲಿ ಪಾಕಿಸ್ತಾನದ ಸ್ನೈಪರ್ ಗುಂಡಿನ ದಾಳಿಗೆ ಸೇನಾ ಪೋರ್ಟರ್ ದೀಪಕ್ ಕುಮಾರ್ ಮೃತಪಟ್ಟಿದ್ದರು ಎಂದು ಅವರು ತಿಳಿಸಿದ್ದಾರೆ.
ಸೆಪ್ಟಂಬರ್‌ನಲ್ಲಿ ಜಮ್ಮು ವಲಯದ ಸಾಂಬಾ ಜಿಲ್ಲೆಯಲ್ಲಿ ಪಾಕಿಸ್ತಾನದ ಸ್ನೈಪರ್ ಗುಂಡು ಹಾರಿಸಿದ ಪರಿಣಾಮ ಗಡಿ ಭದ್ರತಾ ಪಡೆಯ ಯೋಧನೋರ್ವ ಮೃತಪಟ್ಟಿದ್ದ. ಜಮ್ಮು ಹಾಗೂ ಕಾಶ್ಮೀರದಲ್ಲಿರುವ ಭಾರತ-ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿರೇಖೆ, ಗಡಿ ನಿಯಂತ್ರಣ ರೇಖೆ ಹಾಗೂ ನೈಜ ಗಡಿ ನಿಯಂತ್ರಣ ರೇಖೆ ಒಪ್ಪಂದ 2003 ನವೆಂಬರ್‌ನಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಆದರೆ, ಪಾಕಿಸ್ತಾನ ಈ ಒಪ್ಪಂದವನ್ನು ಆಗಾಗ ಉಲ್ಲಂಘಿಸುತ್ತಿದೆ.





