ಕಾಪು: ಇಳಿಜಾರಿನಲ್ಲಿ ಜೀಪು ಚಲಿಸಿ ಬಾಲಕಿ ಮೃತ್ಯು
ಕಾಪು, ನ.11: ಇಳಿಜಾರಿನಲ್ಲಿ ನಿಲ್ಲಿಸಿದ್ದ ಜೀಪು ಚಲಿಸಿದ ಪರಿಣಾಮ ಆಟ ಆಡುತ್ತಿದ್ದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಮೂಡಬೆಟ್ಟು ಗ್ರಾಮದ ಸರಕಾರಿಗುಡ್ಡೆ ಎಂಬಲ್ಲಿ ನ.10ರಂದು ಅಪರಾಹ್ನ ನಡೆದಿದೆ.
ಮೃತ ಬಾಲಕಿಯನ್ನು ಸರಕಾರಿಗುಡ್ಡೆಯ ರೀನ ಎಂಬವರ ಮಗಳು ಆಫಿಯಾ ಬಾನು(6) ಎಂದು ಗುರುತಿಸಲಾಗಿದೆ. ಮನೆಯ ಎದುರುಗಡೆ ರಂಝಾನ್ ಬ್ಯಾರಿ ಎಂಬವರ ಮಗಳು ಝರೀನ ಹಾಗೂ ಮಕ್ಕಳಾದ ಆಪ್ರಿದ್ ಮತ್ತು ಆಫಿಯಾ ಬಾನು ಆಟ ಆಡುತ್ತಿದ್ದರು. ರಂಝಾನ್ ಬ್ಯಾರಿ ತನ್ನ ಜೀಪನ್ನು ಮನೆಯ ಎದುರುಗಡೆ ಡೋರ್ ಲಾಕ್ ಮಾಡದೆ ಇಳಿಜಾರಿನಲ್ಲಿ ನಿಲ್ಲಿಸಿ ಹೋಗಿದ್ದರು.
ಆಫಿಯಾ ಬಾನು ಜೀಪಿನ ಮುಂದೆ ಆಟವಾಡುತ್ತಿದ್ದು, ಆ ವೇಳೆ ಆಫ್ರಿದ್ ಜೀಪಿನ ಬಾಗಿಲು ತೆಗೆದು ಚಾಲಕನ ಸೀಟಿನಲ್ಲಿ ಕುಳಿತು ಜೀಪಿನ ಗೇರ್ ನ್ಯೂಟ್ರಲ್ಗೆ ತಂದ ಎನ್ನಲಾಗಿದೆ. ಇದರ ಪರಿಣಾಮ ಇಳಿಜಾರಿನಲ್ಲಿದ್ದ ಜೀಪು ಒಮ್ಮೆಲೇ ಮುಂದಕ್ಕೆ ಚಲಾಯಿಸಿ ಆಫಿಯಾ ಬಾನುವಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಆಫಿಯಾ ಬಾನು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಳೆಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.