ತಾಲಿಬಾನ್ ದಾಳಿಗೆ ಅಫ್ಘಾನ್ ಸೇನಾನೆಲೆ ಧ್ವಂಸ: 12 ಯೋಧರ ಹತ್ಯೆ
ಕಾಬೂಲ್,ನ.11: ಉತ್ತರ ಅಫ್ಘಾನಿಸ್ತಾನದ ಬಾಘ್ಲಾನ್ ಪ್ರಾಂತದಲ್ಲಿರುವ ಅಫ್ಘಾನ್ ಸೇನಾಪಡೆಯ ಸಣ್ಣ ನೆಲೆಯೊಂದರ ಮೇಲೆ ತಾಲಿಬಾನ್ ಬಂಡುಕೋರರು ದಾಳಿ ನಡೆಸಿ 12 ಮಂದಿ ಯೋಧರನ್ನು ಹತ್ಯೆಗೈದಿದ್ದಾರೆ. ಸೇನಾನೆಲೆಯಲ್ಲಿ ಬಂಡುಕೋರರು ಇರಿಸಿ ಹೋಗಿದ್ದ ಬಾಂಬ್ಗಳು ಸ್ಫೋಟಿಸಿದ್ದರಿಂದ ಮೃತ ಯೋಧರ ಶವಗಳನ್ನು ತೆರವುಗೊಳಿಸಲು ನೆರವಿಗೆ ಆಗಮಿಸಿದ ಬುಡಕಟ್ಟು ಪಂಗಡದ ನಾಲ್ವರು ನಾಗರಿಕರು ಸಾವನ್ನಪ್ಪಿದ್ದಾರೆ.
ಬಂಡುಕೋರರು ಇಬ್ಬರು ಸೈನಿಕರನ್ನು ಅಪಹರಿಸಿದ್ದು, ಇತರ ಮೂವರನ್ನು ಗಾಯಗೊಳಿಸಿದ್ದಾರೆಂದು ಉತ್ತರ ಬಾಗ್ಲಾನ್ ಪ್ರಾಂತದ ಪ್ರಾಂತೀಯ ಮಂಡಳಿಯ ವರಿಷ್ಠ ಸಫ್ಧರ್ ಮೊಹ್ಸಿನಿ ತಿಳಿಸಿದ್ದಾರೆ.
ಸೇನಾನೆಲೆಯನ್ನು ಸಂಪೂರ್ಣವಾಗಿ ಸುಟ್ಟುಹಾಕಿದ ಬಳಿಕ ಉಗ್ರರು ಅದರಲ್ಲಿ ಬಾಂಬ್ಗಳನ್ನು ಹುದುಗಿಸಿಟ್ಟಿದ್ದರೆಂದು ಮೊಹ್ಸಿನಿ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಾಲಿಬಾನ್ ಬಂಡುಕೋರರು, ಗ್ರಾಮೀಣ ಹೊರಠಾಣೆಗಳಲ್ಲಿ ಭದ್ರತಾಪಡೆಗಳ ಮೇಲಿನ ದಾಳಿಯನ್ನು ತೀವ್ರಗೊಳಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಅಮೆರಿಕ ನೇತೃತ್ವದ ಸೇನಾಪಡೆಗಳು ಕಾಲಿರಿಸಿದ ಹದಿನೇಳು ವರ್ಷಗಳ ಆನಂತರವೂ ಬಂಡುಕೋರರು ದೇಶದ ಅರ್ಧದಷ್ಟು ಪ್ರಾಂತದ ಮೇಲೆ ನಿಯಂತ್ರಣ ಸಾಧಿಸಿದ್ದಾರೆ.