ನ.16-18: ಮೂಡುಬಿದಿರೆಯಲ್ಲಿ 15ನೇ ವರ್ಷದ ‘ಆಳ್ವಾಸ್ ನುಡಿಸಿರಿ’ ಕಾರ್ಯಕ್ರಮ

ಮಂಗಳೂರು, ನ.12: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 15ನೇ ವರ್ಷದ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನವಾದ ‘ಆಳ್ವಾಸ್ ನುಡಿಸಿರಿ’ ಕಾರ್ಯಕ್ರಮವು ನ.16,17,18ರಂದು ಮೂಡುಬಿದಿರೆಯ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ಸಂತ ಶಿಶುನಾಳ ಶರೀಫ ಸಭಾಂಗಣದ ರತ್ನಾಕರವರ್ಣಿ ವೇದಿಕೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ‘ಕರ್ನಾಟಕ ದರ್ಶನ : ಬಹುರೂಪಿ ಆಯಾಮಗಳು’ ಎಂಬ ಪರಿಕಲ್ಪನೆಯಲ್ಲಿ ನಡೆಯುವ ಈ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಸಾಹಿತಿ, ಸಂಶೋಧಕಿ ಡಾ. ಮಲ್ಲಿಕಾ ಎಸ್.ಘಂಟಿ ವಹಿಸಲಿದ್ದಾರೆ. ಸಂಶೋಧಕ ಡಾ.ಷ.ಶೆಟ್ಟರ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಎ.ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೆ.ಅಭಯಚಂದ್ರ ಜೈನ್, ಅಮರನಾಥ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಕಸಾಪ ದ.ಕ.ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹಾಗೂ ನೀಲಾವರ ಸುರೇಂದ್ರ ಅಡಿಗ ಉಪಸ್ಥಿತರಿರುವರು ಎಂದರು.
ಸಾಂಸ್ಕೃತಿಕ ಮೆರವಣಿಗೆ
ನ.16ರಂದು ಬೆಳಗ್ಗೆ 8:30ರಿಂದ 9:30ರವರೆಗೆ ರಾಜ್ಯದ ಪ್ರತಿಷ್ಠಿತ 85 ಸಾಂಸ್ಕೃತಿಕ ಕಲಾ ತಂಡಗಳಿಂದ ಭವ್ಯ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 8:30ಕ್ಕೆ ಸಾಂಸ್ಕೃತಿಕ ಮೆರವಣಿಗೆಯನ್ನು ಬರೋಡಾದ ಶಶಿಧರ ಶೆಟ್ಟಿ ಉದ್ಘಾಟಿಸಲಿದ್ದು, ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಧ್ವಜಾರೋಹಣಗೈಯಲಿದ್ದಾರೆ.
ನಾಲ್ಕು ಗೋಷ್ಠಿಗಳು
ಮೊದಲ ಗೋಷ್ಠಿ ‘ಕರ್ನಾಟಕ ದರ್ಶನ-ಸಾಹಿತ್ಯ’ ಈ ವಿಚಾರದಲ್ಲಿ ‘ರಾಮಾಯಣ:ಸಮಕಾಲೀನ ನೆಲೆಗಳು’ ಕುರಿತು ಲಕ್ಷ್ಮೀಶ ತೋಳ್ಪಾಡಿ, ‘ಮಹಾಭಾರತ: ಸಮಕಾಲೀನ ನೆಲೆಗಳು’ ಕುರಿತು ಉಮಾಕಾಂತ ಭಟ್ಟ, ಮೇಲುಕೋಟೆ ವಿಷಯ ಮಂಡಿಸಲಿದ್ದಾರೆ.
ಎರಡನೆ ಗೋಷ್ಠಿ ‘ಕರ್ನಾಟಕ ದರ್ಶನ-ಅಧ್ಯಾತ್ಮ ಪರಂಪರೆ’ ಈ ವಿಚಾರದಲ್ಲಿ ‘ವಚನ’ ಕುರಿತು ಡಾ. ವಿಜಯ ಕುಮಾರ ಎಸ್. ಕಟಗಿಹಳ್ಳಿಮಠ, ‘ಕೀರ್ತನ’ ಕುರಿತು ಡಾ.ಎಚ್.ಎನ್.ಮುರಳೀಧರ, ‘ಸೂಫಿ’ ಕುರಿತು ರಂಜಾನ್ ದರ್ಗಾ, ‘ತತ್ತ್ವಪದ’ ಕುರಿತು ಡಾ.ಬಸವರಾಜ ಸಬರದ ವಿಷಯ ಮಂಡಿಸಲಿದ್ದಾರೆ.
ಮೂರನೆಯ ಗೋಷ್ಠಿ ‘ಕರ್ನಾಟಕ ದರ್ಶನ - ಬಹುಭಾಷಾ ಪರಂಪರೆ’ ಈ ವಿಚಾರದಲ್ಲಿ ‘ಶಿಕ್ಷಣ ಮತ್ತು ಸಾಮರಸ್ಯ’ದ ಕುರಿತು ಬಿ.ಗಣಪತಿ ಹಾಗೂ ನಾಲ್ಕನೆಯ ಗೋಷ್ಠಿ ‘ಕರ್ನಾಟಕ ದರ್ಶನ- ಜಾನಪದ ಪರಂಪರೆ’ ಈ ವಿಚಾರದಲ್ಲಿ ‘ಜನಪದ ಸಾಹಿತ್ಯ’ದ ಕುರಿತು ಡಾ. ಪಿ.ಕೆ.ರಾಜಶೇಖರ, ‘ಜನಪದ ಆರಾಧನೆ’ಯ ಕುರಿತು ಡಾ.ಅಂಬಳಿಕೆ ಹಿರಿಯಣ್ಣ ಹಾಗೂ ‘ಜನಪದ ಕಲಾ ಪರಂಪರೆ’ಯ ಕುರಿತು ಡಾ.ಡಿ.ಬಿ.ನಾಯಕ ವಿಚಾರ ಮಂಡಿಸಲಿದ್ದಾರೆ.
ಎಂಟು ವಿಶೇಷೋಪನ್ಯಾಸಗಳು
ಈ ಸಮ್ಮೇಳನದಲ್ಲಿ ಒಟ್ಟು 8 ವಿಶೇಷೋಪನ್ಯಾಸಗಳಿವೆ. ಕನ್ನಡ ಪದ ಸೃಷ್ಟಿ - ಸ್ವೀಕರಣ ಮತ್ತು ಬಳಕೆ ಕುರಿತು ಪ್ರೊ.ಎಂ.ಕೃಷ್ಣೇ ಗೌಡ, ಇತ್ತೀಚಿನ ಮಹತ್ವದ ಪ್ರಕಟಣೆಗಳ ಕುರಿತು ರಘುನಾಥ ಚ.ಹ, ಅಖಂಡ ಕರ್ನಾಟಕದ ಕುರಿತು ವೈ.ಎಸ್.ವಿ.ದತ್ತ, ಸಮಾಜಾಭಿವೃದ್ಧಿಯಲ್ಲಿ ವ್ಯಕ್ತಿ ಹೊಣೆಗಾರಿಕೆ ಕುರಿತು ಪ್ರೊ.ಜಿ.ಬಿ.ಶಿವರಾಜ್, ಜೀವನ ಪದ್ಧತಿಯ ಆತಂಕದ ನೆಲೆಗಳು ಕುರಿತು ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಸಮಕಾಲೀನ ಸಂದರ್ಭ : ಮಹಿಳಾ ಬಿಕ್ಕಟ್ಟುಗಳು ಕುರಿತು ಡಾ.ಎಂ.ಉಷಾ, ಸಾಮಾಜಿಕ ಜಾಲತಾಣ ಕುರಿತು ರೋಹಿತ್ ಚಕ್ರತೀರ್ಥ ಹಾಗೂ ಐಟಿಯಿಂದ ಮೇಟಿಗೆ ಕುರಿತು ವಸಂತ ಕಜೆ ವಿಚಾರಗಳನ್ನು ಮಂಡಿಸಲಿದ್ದಾರೆ.
8 ಕವಿಸಮಯ - ಕವಿನಮನ
ಕವಿಸಮಯ-ಕವಿನಮನದಲ್ಲಿ ಪ್ರೊ.ಸತ್ಯಮಂಗಳ ಮಹಾದೇವ, ಡಾ.ವೆಂಕಟಗಿರಿ ದಳವಾಯಿ, ಆನಂದ ಝುಂಜರವಾಡ, ನಂದಿನಿ ವಿಶ್ವನಾಥ ಹೆದ್ದುರ್ಗ, ಡಾ.ಕಾ.ವೆಂ.ಶ್ರೀನಿವಾಸ ಮೂರ್ತಿ, ಮೀನಾ ಮೈಸೂರು, ಮೈ.ಶ್ರೀ ನಟರಾಜ, ವಾಷಿಂಗ್ಟನ್, ವಿಕ್ರಮ ಹತ್ವಾರ ಪಾಲ್ಗೊಳ್ಳಲಿದ್ದಾರೆ.
ಮೂವರ ಸಂಸ್ಮರಣೆ
ಕನ್ನಡ ನಾಡು -ನುಡಿ-ಸಂಸ್ಕೃತಿಗಾಗಿ ಸೇವೆ ಸಲ್ಲಿಸಿ ವರ್ತಮಾನದಲ್ಲಿ ನಮ್ಮಂದಿಲ್ಲದ ವಿದ್ವಾಂಸರಿಗೆ ಗೌರವಾರ್ಪಣೆ ಸಲ್ಲಿಸುವ ಕಾರ್ಯಕ್ರಮದಲ್ಲಿ ವಿದ್ವಾಂಸ ಡಾ. ಪ್ರಭುಶಂಕರ ಅವರ ಕುರಿತು ಡಾ. ಎನ್.ಎಸ್.ತಾರಾನಾಥ, ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಅವರ ಕುರಿತು ಡಾ.ಜಿ.ಎಂ.ಹೆಗಡೆ ಹಾಗೂ ಕವಿ ಡಾ. ಸುಮತೀಂದ್ರ ನಾಡಿಗರ ಕುರಿತು ಮಹಾಬಲಮೂರ್ತಿ ಕೊಡ್ಲಕೆರೆ ನುಡಿನಮನ ಸಲ್ಲಿಸಲಿದ್ದಾರೆ.
ದ್ವಿಶತಮಾನದ ನಮನ
ಕನ್ನಡದ ಖ್ಯಾತ ತತ್ತ್ವಪದಗಾರರೂ ಸೂಫಿ ಸಂತರೂ ಆಗಿರುವ ಸಂತ ಶಿಶುನಾಳ ಶರೀಫರ ಇನ್ನೂರನೆಯ ವರ್ಷಾಚರಣೆಯ ವರ್ಷದ ಹಿನ್ನೆಲೆಯಲ್ಲಿ ನಾಡೋಜ ಡಾ.ಮಹೇಶ್ ಜೋಶಿಯವರು ಸಂತ ಶಿಶುನಾಳ ಶರೀಫರ ಕುರಿತು ಮಾತಿನ ಗೌರವಾರ್ಪಣೆ ನಡೆಸಿಕೊಡಲಿದ್ದಾರೆ.
ನನ್ನ ಕತೆ ನಿಮ್ಮ ಜೊತೆ
ಮಾತಿನ ಮಂಟಪವಾದ ‘ನನ್ನ ಕತೆ -ನಿಮ್ಮ ಜೊತೆ’ ಕಾರ್ಯಕ್ರಮದಲ್ಲಿ ಸಿನಿಮಾ ಹಾಗೂ ಕಿರುತೆರೆ ನಿರೂಪಣಾ ಕ್ಷೇತ್ರಗಳಲ್ಲಿ ಅಪರಿಮಿತ ಸಾಧನೆ ಮಾಡಿ ರುವ ರಮೇಶ್ ಅರವಿಂದ್ ಹಾಗೂ ಮಂಗಳಮುಖಿಯಾಗಿ ಏಕವ್ಯಕ್ತಿ ಪ್ರದರ್ಶನದ ಮೂಲಕ ಜನಮನ ಸೂರೆಗೊಂಡ ಎ.ರೇವತಿ, ಚೆನ್ನೈ ತಮ್ಮ ಮನದಾಳದ ಮಾತುಗಳನ್ನಾಡಲಿದ್ದಾರೆ.
12 ಮಂದಿಗೆ ನುಡಿಸಿರಿ ಪ್ರಶಸ್ತಿ ಪ್ರದಾನ
ಕನ್ನಡ ನಾಡು-ನುಡಿ-ಸಂಸ್ಕೃತಿಗಾಗಿ ದುಡಿದ ಡಾ.ಜಿ.ಡಿ.ಜೋಶಿ ಮುಂಬೈ, ಡಾ.ಎ..ನರಸಿಂಹಮೂರ್ತಿ ಮೈಸೂರು, ಪದ್ಮಶ್ರೀ ಪುರಸ್ಕೃತ ಡಾ. ಭಾರತಿ ವಿಷ್ಣುವರ್ಧನ ಬೆಂಗಳೂರು, ಡಾ.ಅರುಂಧತಿ ನಾಗ್‌ಬೆಂಗಳೂರು, ಎಲ್.ಬಂದೇನವಾಜ ಖಲೀಫ್ ಆಲ್ದಾಳ ಕಲಬುರಗಿ, ಡಾ.ಕೆ.ರಮಾನಂದ ಬನಾರಿ ಕಾಸರಗೋಡು, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಬೆಂಗಳೂರು, ಪ್ರೊ.ಎ.ವಿ.ನಾವಡ, ಮಂಗಳೂರು, ಫಾ. ಪ್ರಶಾಂತ್ ಮಾಡ್ತ ಬೆಂಗಳೂರು, ಹೊ.ನಾ. ರಾಘವೇಂದ್ರ (ಗರ್ತಿಗೆರೆ ರಾಘಣ್ಣ), ಶಿವಮೊಗ್ಗ, ಅರುವ ಕೊರಗಪ್ಪಶೆಟ್ಟಿ, ಮಂಗಳೂರು, ಮೈಸೂರು ನಟರಾಜ ವಾಷಿಂಗ್ಟನ್ ಅವರಿಗೆ ತಲಾ 25 ಸಾವಿರ ರೂ.ನಗದು, ಪ್ರಶಸ್ತಿ ಪತ್ರ ನೀಡಿ ಸಮಾರೋಪ ಸಮಾರಂಭದಲ್ಲಿ ‘ಆಳ್ವಾಸ್ ನುಡಿಸಿರಿ ಪ್ರಶಸ್ತಿ’ ನೀಡಿ ಪುರಸ್ಕರಿಸಲಾಗುತ್ತದೆ.
ಡಾ. ಚಂದ್ರಶೇಖರ ಕಂಬಾರರಿಗೆ ಗೌರವ ಸನ್ಮಾನ
ಕೇಂದ್ರ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಕನ್ನಡಕ್ಕೆ ಗೌರವ ತಂದುಕೊಟ್ಟ ಕನ್ನಡದ ಖ್ಯಾತ ಕವಿ, ಕಾದಂಬರಿಗಾರ ಹಾಗೂ ನಾಟಕ ಗಾರ ಡಾ.ಚಂದ್ರಶೇಖರ ಕಂಬಾರ ಅವರಿಗೆ ಗೌರವ ಸನ್ಮಾನ ಮಾಡಲಾಗುತ್ತದೆ.
ಆರು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
ರತ್ನಾಕರವರ್ಣಿ ವೇದಿಕೆ, ಸಂತ ಶಿಶುನಾಳ ಶರೀಫ ಸಭಾಂಗಣ, ಕು.ಶಿ.ಹರಿದಾಸ ಭಟ್ಟ ವೇದಿಕೆ ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯ ವೇದಿಕೆಗಳಲ್ಲಿ ಮುಸ್ಸಂಜೆಯಿಂದ ತಡರಾತ್ರಿಯವರೆಗೆ ಹಾಗೂ ಡಾ.ವಿ.ಎಸ್.ಆಚಾರ್ಯ ಸಭಾಭವನದ ಮಿಜಾರುಗುತ್ತು ಭಗವಾನ್ ಶೆಟ್ಟಿ ವೇದಿಕೆ, ಕೆ.ವಿ.ಸುಬ್ಬಣ್ಣ ಬಯಲುರಂಗ ಮಂದಿರ ಹಾಗೂ ಕೆ.ಎಸ್.ಪುಟ್ಟಣ್ಣಯ್ಯ ಕೃಷಿ ಆವರಣದ ಆನಂದ ಬೋಳಾರ್ ವೇದಿಕೆಗಳಲ್ಲಿ ಹಗಲು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ನ.15ರಂದು ಆಳ್ವಾಸ್ ವಿದ್ಯಾರ್ಥಿ ಸಿರಿ
ನ.15ರಂದು ಬೆಳಗ್ಗೆ 9:30ಕ್ಕೆ ಆಳ್ವಾಸ್ ವಿದ್ಯಾರ್ಥಿ ಸಿರಿಯನ್ನು ಚಿತ್ರ ನಟಿ ವಿನಯಾ ಪ್ರಸಾದ್ ಉದ್ಘಾಟಿಸಲಿದ್ದಾರೆ. ಕಾಸರಗೋಡು ವಿದ್ಯಾನಗರದ ಚಿನ್ಮಯ ವಿದ್ಯಾಲಯದ ಸನ್ನಿಧಿ ಟಿ.ರೈ ಪೆರ್ಲ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾಸರಗೋಡು, ದ.ಕ. ಮತ್ತು ಉಡುಪಿ ಜಿಲ್ಲೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳು ತಮ್ಮ ಸಾಹಿತಿ- ಸಾಂಸ್ಕೃತಿಕ ಪ್ರತಿಭೆಗಳನ್ನು ಅನಾವರಣಗೊಳಿಸಲಿದ್ದಾರೆ. ಆಳ್ವಾಸ್ ವಿದ್ಯಾರ್ಥಿ ಸಿರಿ 2018ರ ಪುರಸ್ಕಾರಕ್ಕಾಗಿ ಮಕ್ಕಳ ರಂಗ ವಿನ್ಯಾಸಕಾರ ಮೂರ್ತಿ ದೇರಾಜೆ, ಮಕ್ಕಳ ವ್ಯಕ್ತಿತ್ವ ಸಂವರ್ಧನೆಗಾಗಿ ಸಾನಿಧ್ಯ ವಿಶೇಷ ಮಕ್ಕಳ ವಸತಿ ಶಾಲೆಗೆ ಹಾಗೂ ಬಾಲಪ್ರತಿಭೆಗಾಗಿ ಮಾಸ್ಟರ್ ಸದ್ಗುಣ ಐತಾಳ್, ಮತ್ತು ಆಳ್ವಾಸ್ ವಿದ್ಯಾರ್ಥಿಸಿರಿ ಗೌರವ ಪ್ರಶಸ್ತಿಯನ್ನು ಹಿರಿಯ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಗದಗ ಅವರಿಗೆ ನೀಡಿ ಸನ್ಮಾನಿಸಲಾಗುವುದು. ಸಂಜೆ ಗಂಟೆ 4:30ಕ್ಕೆ ಡಾ. ಎಂ.ಮೋಹನ ಆಳ್ವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭವು ನಡೆಯಲಿದೆ.
ಆಳ್ವಾಸ್ ಕೃಷಿಸಿರಿ
ನಾಡು-ನುಡಿ-ಸಂಸ್ಕೃತಿಗಳ ಜೊತೆಗೆ ಅನ್ನವನ್ನೂ, ಅನ್ನದಾತರನ್ನೂ ಗೌರಸುವ ಕಾರ್ಯಕ್ರಮವಾದ ಆಳ್ವಾಸ್ ಕೃಷಿಸಿರಿಯು ನ.16,17,18ರವರೆಗೆ ಕೆ.ಎಸ್. ಪುಟ್ಟಣ್ಣಯ್ಯ ಕೃಷಿ ಆವರಣದ ಆನಂದ ಬೋಳಾರ್ ವೇದಿಕೆಯಲ್ಲಿ ನಡೆಯಲಿದೆ. ನ.15ರಂದು ಸಂಜೆ 5ಕ್ಕೆ ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಕೃಷಿ ಸಿರಿ ಉದ್ಘಾಟಿಸಲಿದ್ದಾರೆ.
ಪುಷ್ಪ ಪ್ರದರ್ಶನ, ಮತ್ಸ್ಯ ಮತ್ತು ಸಮುದ್ರ ಚಿಪ್ಪುಪ್ರದರ್ಶನ, ನ್ಯೂಝಿಲ್ಯಾಂಡ್ ಮೂಲದ ಆಹಾರಕ್ಕಾಗಿ ಬಳಸುವ ಬಣ್ಣದ ಸಸ್ಯಗಳ ಪ್ರದರ್ಶನ, ತರಕಾರಿ-ಹಣ್ಣುಗಳಲ್ಲಿ ಕಲಾಕೃತಿ ಪ್ರದರ್ಶನ, 44 ತಳಿ ಬಿದಿರು ಗಿಡ, 40 ತಳಿ ಬಿದಿರು ಪ್ರದರ್ಶನ, ಕೃಷಿ ಸಂಬಂಧಿ ಗುಡಿಕೈಗಾರಿಕೆಗಳ ಪ್ರಾತ್ಯಕ್ಷಿಕೆ, 3 ಎಕರೆ ಪ್ರದೇಶದಲ್ಲಿ ಸುಧಾರಿತ ಮತ್ತು ಸಾಂಪ್ರದಾಯಿಕ ನೈಜ ಕೃಷಿ ದರ್ಶನ, 250ಕ್ಕೂ ಅಧಿಕ ಕೃಷಿ ಮಳಿಗೆಗಳು (ನರ್ಸರಿ, ಕೃಷಿ ಉಪಕರಣ ಮಾರಾಟ ಮತ್ತು ಪ್ರದರ್ಶನ), ಬೆಳಗ್ಗಿನಿಂದ ತಡರಾತ್ರಿವರೆಗೆ ತುಳು-ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಇತರ ಸಿರಿಗಳು
ರಾಜ್ಯದ ಪ್ರಸಿದ್ಧ 25 ಚಿತ್ರಕಲಾವಿದರಿಂದ ಆಳ್ವಾಸ್ ಚಿತ್ರಸಿರಿ ವರ್ಣಚಿತ್ರ ಕಲಾಮೇಳ ಹಾಗೂ ಪ್ರದರ್ಶನ, ರಾಜ್ಯದ 25 ವ್ಯಂಗ್ಯ ಚಿತ್ರಕಲಾದರಿಂದ ವ್ಯಂಗ್ಯಚಿತ್ರ ರಚನೆ ಮತ್ತು ಪ್ರದರ್ಶನ ಹಾಗೂ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ವಿಜ್ಞಾನ ಮಾದರಿಗಳ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನದ ಆಳ್ವಾಸ್ ವಿಜ್ಞಾನಸಿರಿ 2018 ಕಾರ್ಯಕ್ರಮಗಳು ನಡೆಯಲಿದೆ.
ಆಳ್ವಾಸ್ ಛಾಯಾಚಿತ್ರಸಿರಿಯಲ್ಲಿ ಫೆಡರೇಶನ್ ಆಫ್ ಇಂಡಿಯಾ ಪೋಟೋಗ್ರಾಫಿಯವರ ಮಾರ್ಗದರ್ಶನದಲ್ಲಿ ಛಾಯಾಚಿತ್ರ ಸ್ಪರ್ಧೆ ಮತ್ತು ಪ್ರದರ್ಶನ ನಡೆಯಲಿದೆ. ದೇಶದ 750ಕ್ಕೂ ಹೆಚ್ಚು ಛಾಯಾಚಿತ್ರಕಾರರ 4500ಕ್ಕೂ ಅಧಿಕ ಛಾಯಾಚಿತ್ರಗಳ ದಾಖಲೆ ಪ್ರದರ್ಶನವಿದೆ. ಕಲರ್ ಫುಲ್ ಇಂಡಿಯಾ, ರೂರಲ್ ಲೈಫ್, ವೈಲ್ಡ್‌ಲೈಫ್ ಹಾಗೂ ಮೊನೋಕ್ರೋಮ್‌ಗಳೆಂಬ ನಾಲ್ಕು ಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಘೋಷಿಸಲಾಗಿದೆ. ಪ್ರಥಮ ಬಹುಮಾನವಾಗಿ 7,500 ರೂ, ದ್ವಿತೀಯ ಬಹುಮಾನವಾಗಿ 5,000 ರೂ, ತೃತೀಯ ಬಹುಮಾನವಾಗಿ 3,000 ರೂ.ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುತ್ತದೆ. ಅಲ್ಲದೆ ಐದು ಸರ್ಟಿಫಿಕೇಟ್ ಆಫ್ ಮೆರಿಟ್ ಪ್ರಶಸ್ತಿಯನ್ನೂ ನೀಡಲಾಗುವುದು.
ಕರ್ನಾಟಕ ಚಲನಚಿತ್ರ ಅಕಾಡಮಿ ವತಿಯಿಂದ ಕನ್ನಡ ಮತ್ತು ಪ್ರಾದೇಶಿಕ ಭಾಷೆಯ ಆಳ್ವಾಸ್ ಚಲನಚಿತ್ರಸಿರಿ ಕುವೆಂಪು ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯಲಿದ್ದು, ಚಲನಚಿತ್ರ ಅಕಾಡಮಿಯ ಅಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರತಿ ಚಲನಚಿತ್ರ ಮುಗಿದ ನಂತರ ಆಯಾ ಚಲನಚಿತ್ರ ನಿರ್ದೇಶಕರ ಜೊತೆ ಸಂವಾದ ಕಾರ್ಯಕ್ರಮವಿದೆ.
ಅನ್ಯಕಾರ್ಯ ನಿಮಿತ್ತ ರಜಾ ಸೌಲಭ್ಯ
ಮೂರು ದಿನಗಳ ಕಾಲ ನಡೆಯುವ ಆಳ್ವಾಸ್ ನುಡಿಸಿರಿಯಲ್ಲಿ ಭಾಗಿಗಳಾಗುವ ಪ್ರತಿನಿಧಿಗಳಿಗೆ ಅನ್ಯಕಾರ್ಯ ನಿಮಿತ್ತ ರಜಾ ಸೌಲಭ್ಯವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕಾಲೇಜು ಶಿಕ್ಷಣ ಇಲಾಖೆಗಳು ಮಂಜೂರು ಮಾಡಿದ್ದು, ಅವೆರಡರ ಅಧೀನದಲ್ಲಿರುವ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.







