ಹನೂರು: ಕೌಟುಂಬಿಕ ಕಲಹ ಹಿನ್ನೆಲೆ; ಪತ್ನಿಯನ್ನು ಹತ್ಯೆಗೈದ ಪತಿ

ಹನೂರು,ನ.12: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ರಾಮಾಪುರ ಪೋಲಿಸ್ ಠಾಣೆ ವ್ಯಾಪ್ತಿಯ ಗೊಡೆಸ್ಟ್ ನಗರದಲ್ಲಿ ನಡೆದಿದೆ.
ಯಳಂದೂರಿನ ತಾಲೂಕಿನ ಯರಂಗಂಬಳ್ಳಿ ಗ್ರಾಮದ ಸುಚಿತ್ರಾ ಆಲಿಯಾಸ್ ಭಾಗ್ಯ (19) ಮೃತ ಯುವತಿ. ಈಕೆಯ ಪತಿ ಗೊಡೆಸ್ಟ್ ನಗರದ ತಂಗರಾಜು (38) ಕೊಲೆಗೈದ ಆರೋಪಿ.
ಘಟನೆ ವಿವರ: ಆರೋಪಿ ತಂಗರಾಜು ಈ ಹಿಂದೆ ಇಬ್ಬರನ್ನು ಮದುವೆ ಮಾಡಿಕೊಂಡಿದ್ದ. ಆದರೆ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಇಬ್ಬರು ಪತ್ನಿಯರು ಈತನಿಂದ ದೂರವಿದ್ದಾರೆ. ಬಳಿಕ ಮೈಸೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದ್ದು, ಈ ವೇಳೆ ಮೈಸೂರಿನ ರಾಜೀವ್ ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಿದ್ದ ಯಳಂದೂರಿನ ಯರಂಗಂಬಳ್ಳಿ ಗ್ರಾಮದ ಸುಚಿತ್ರಾ ಎಂಬವಳೊಂದಿಗೆ ಗೆಳತನವಾಗಿ ನಂತರ ಪ್ರೇಮಾಂಕುರಕ್ಕೆ ತಿರುಗಿ ನಂತರ ಮಾರ್ಟಳ್ಳಿಯ ಗಾಡಸ್ಟ್ ನಗರದಲ್ಲಿ ಕಳೆದ 10 ತಿಂಗಳ ಹಿಂದೆ ಮದುವೆ ಮಾಡಿಕೊಂಡಿದ್ದನು ಎನ್ನಲಾಗಿದೆ. ಆದರೆ ಕಳೆದ ಹಲವು ತಿಂಗಳಿನಿಂದ ಮನೆಯಲ್ಲಿ ಆಗ್ಗಾಗ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಭಾನುವಾರ ರಾತ್ರಿ ಗಲಾಟೆ ವಿಕೋಪಕ್ಕೆ ತಿರುಗಿದ್ದು, ತಂಗರಾಜು ಪತ್ನಿಯನ್ನು ಕಬ್ಬಿಣದ ಸಲಾಕೆಯಿಂದ ಶರೀರದ ವಿವಿಧ ಭಾಗಗಳಿಗೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಸುಚಿತ್ರಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಘಟನೆ ತಿಳಿದ ಸ್ಥಳೀಯ ನಿವಾಸಿಗಳು ಪೋಲಿಸರಿಗೆ ಮಾಹಿತಿ ತಿಳಿಸಿದ್ದಾರೆ. ಬಳಿಕ ಆಗಮಿಸಿದ ಪೋಲಿಸರು ಸ್ಥಳ ಪರಿಶೀಲನೆ ನಡೆಸಿದರು. ಮೃತ ಯುವತಿಯ ತಾಯಿ ದುಂಡಮ್ಮ ನೀಡಿದ ದೂರಿನ ಆಧಾರದಲ್ಲಿ ಕೊಳ್ಳೇಗಾಲ ತಹಶೀಲ್ದಾರ್ ರಾಯಪ್ಪ ಹುಣಸಗಿ ಅವರು ಸ್ಥಳಕ್ಕೆ ಭೇಟಿ ಪರಿಶೀಲಿಸಿ ಮಾಹಿತಿ ಪಡೆದರು. ಬಳಿಕ ಮೃತದೇಹವನ್ನು ಹನೂರಿನ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು. ಆರೋಪಿ ತಲೆಮರೆಸಿಕೊಂಡಿದ್ದು, ಈ ಸಂಬಂಧ ರಾಮಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







