ಸುರಕ್ಷಾ ನಿಯಮ ಪಾಲಿಸಿ
ಮಾನ್ಯರೇ,
ಇದೀಗ ಶಾಲಾ ಮಕ್ಕಳ ಪ್ರವಾಸದ ಕಾಲ. ಮಕ್ಕಳ ಪ್ರವಾಸಕ್ಕೆ ಕೆಲವರು ಖಾಸಗಿ ವಾಹನಗಳನ್ನು ಬಳಸಿದರೆ ಇನ್ನು ಕೆಲವರು ಶಾಲಾ ವಾಹನಗಳನ್ನೂ ಬಳಸುತ್ತಾರೆ. ಇಂತಹ ಪ್ರವಾಸಗಳಲ್ಲಿ ನಿರ್ದಿಷ್ಟ ಅವಧಿಯಲ್ಲಿ ನಿಶ್ಚಿತ ಸ್ಥಳಗಳನ್ನು ನೋಡಿ ಮುಗಿಸುವ ಧಾವಂತದಲ್ಲಿ ಮಕ್ಕಳ ಸುರಕ್ಷತೆಯ ಪ್ರಶ್ನೆ ಮೂಲೆಪಾಲಾಗುತ್ತಿದೆ. ಪ್ರತಿಯೊಂದು ಶಾಲೆಯೂ ತಮ್ಮ ವಿದ್ಯಾರ್ಥಿಗಳ ಸುರಕ್ಷತೆಯನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಬೇಕು. ಸುರಕ್ಷಿತ ಚಾಲನೆಗಾಗಿ ಪುರಸ್ಕಾರ ನೀಡುವ ಕ್ರಮ ರೂಢಿಸಿಕೊಂಡರೆ ಒಳ್ಳೆಯದು. ಶಾಲಾ ಬಸ್‌ಗಳ ಪರಿಶೀಲನೆಯನ್ನು ನಿಗದಿತ ರೀತಿಯಲ್ಲಿ ನಮ್ಮ ಆಡಳಿತ ವ್ಯವಸ್ಥೆ ಪಾಲಿಸಿಕೊಂಡು ಬಂದಿಲ್ಲ. ಸಂಬಂಧಿತ ಇಲಾಖೆಗಳು ಶಾಲಾ ವಾಹನಗಳ ಪರೀಶೀಲನೆ ನಡೆಸಿ ಪ್ರಮಾಣಪತ್ರ ನೀಡುವ ಕ್ರಮವನ್ನು ರೂಢಿಸಿಕೊಳ್ಳಬೇಕು. ಅತಿ ವೇಗ ಹಾಗೂ ಅಜಾಗರೂಕ ಚಾಲನೆಯನ್ನು ಸಾರ್ವಜನಿಕರು ಗುರುತಿಸಿ ತಕ್ಷಣವೇ ದೂರು ನೀಡುವ ರೂಢಿ ಬೆಳೆಸಿಕೊಳ್ಳಬೇಕು. ಶಾಲಾ ಆಡಳಿತ ಮಂಡಳಿಗಳು ಪೋಷಕರು ಹಾಗೂ ಕಾನೂನುಪಾಲಕ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಮಕ್ಕಳನ್ನು ಕರೆದೊಯ್ಯುವ ವಾಹನಗಳ ಅವಘಡಗಳನ್ನು ತಡೆಗಟ್ಟಬಹುದು.
-ಭಾಗ್ಯಶ್ರೀ ಎಸ್., ಶಿವಮೊಗ್ಗ





