ತುಮಕೂರು: ಸಾಕು ಮಗಳ ಮೇಲಿನ ಅತ್ಯಾಚಾರ ಪ್ರಕರಣ; ಆರೋಪಿಗೆ 12 ವರ್ಷ ಜೈಲು

ಸಾಂದರ್ಭಿಕ ಚಿತ್ರ
ತುಮಕೂರು,ನ.13: ಸಾಕು ಮಗಳನ್ನೇ ಲೈಂಗಿಕ ಕೃತ್ಯಕ್ಕೆ ಬಳಸಿಕೊಂಡು ಆಕೆ ಗರ್ಭಿಣಿಯಾಗಲು ಕಾರಣನಾದ ಸಾಕು ತಂದೆಗೆ ಇಲ್ಲಿನ ಪೋಕ್ಸೋ ನ್ಯಾಯಾಲಯವು 12 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2015 ರಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದ್ದ ಈ ಘಟನೆಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ಮೂರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(ವಿಶೇಷ ನ್ಯಾಯಾಲಯ) ಭಾರತ ದಂಡ ಸಂಹಿತೆ ಹಾಗೂ ಪೋಕ್ಸೋ ಕಾಯ್ದೆಯ ಕಲಂಗಳ ಅಡಿಯಲ್ಲಿ ತೀರ್ಪು ಪ್ರಕಟಿಸಿದೆ.
ಚಿಕ್ಕನಾಯಕನಹಳ್ಳಿಯ ಜಯರಾಮ ಎಂಬುವವರು ಅನಾಥವಾಗಿ ನಿಂತಿದ್ದ ಓರ್ವ ಬಾಲಕಿಯನ್ನು ತನ್ನ ಮನೆಗೆ ಕರೆತಂದು ಸಾಕುತ್ತಿದ್ದರು. ಆನಂತರ ಸದರಿ ಬಾಲಕಿಯನ್ನು ಶಾಲೆಗೂ ಸೇರಿಸಿದ್ದರು. 2015ರಲ್ಲಿ ಬಾಲಕಿ 16 ವರ್ಷದವಳಾಗಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.ಇದಕ್ಕೂ ಮುನ್ನ ಅಂದರೆ, ಪ್ರಕರಣ ದಾಖಲಾಗುವ ಒಂದೂವರೆ ವರ್ಷಗಳಿಂದ ಬಾಲಕಿಯ ಮೇಲೆ ಈತ ಲೈಂಗಿಕ ಕೃತ್ಯ ನಡೆಸುತ್ತಿದ್ದನೆಂದು ತಿಳಿದು ಬಂದಿದೆ.
ಈ ಸಂಬಂಧ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ 15.12.2015 ರಂದು ಜಯರಾಮ ವಿರುದ್ಧ ದೂರು ದಾಖಲಾಗಿತ್ತು. ಪೊಲೀಸರು ಐಪಿಸಿ 376 ಸಿ, 506 ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಸಂರಕ್ಷಣಾ ಕಾಯ್ದೆ ಕಲಂ 6 ಮತ್ತು 8 ರ ಅಡಿಯಲ್ಲಿ ದೂರು ದಾಖಲಿಸಿದ್ದರು.
ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕವು ಬಾಲಕಿಗೆ ರಕ್ಷಣೆ ಒದಗಿಸಿತ್ತು. ಚಿ.ನಾ.ಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಮಾರಪ್ಪ ಅವರು ಪ್ರಕರಣದ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಬಾಲಕಿ ಗರ್ಭಿಣಿಯಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣಾ ಹಂತಕ್ಕೆ ಬರುವಷ್ಟರಲ್ಲಿ ಆಕೆ ಮಗುವಿಗೆ ಜನ್ಮವಿತ್ತಿದ್ದಳು. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೂ ರಕ್ತದ ಮಾದರಿ ಕಳುಹಿಸಿಕೊಡಲಾಗಿತ್ತು.
ಪ್ರಕರಣದ ವಿಚಾರಣೆ ಮುಗಿಸಿದ ನ್ಯಾಯಾಧೀಶರಾದ ಹೆಚ್.ಎಸ್.ಮಲ್ಲಿಕಾರ್ಜುನಸ್ವಾಮಿ ಅವರು ಆರೋಪಿ ಜಯರಾಮ ತಪ್ಪಿತಸ್ಥನೆಂದು ತೀರ್ಮಾನಿಸಿ ಐಪಿಸಿ 376(2), ಎಫ್ 372 (2) 1 ಹಾಗೂ 376 (2) ಎನ್ ಕಲಂಗಳ ಅಡಿಯಲ್ಲಿ ಮತ್ತು ಕಲಂ 6 ರ ಪೋಕ್ಸೋ ಕಾಯ್ದೆಯಡಿಯಲ್ಲಿ 12 ವರ್ಷಗಳ ಕಠಿಣ ಕಾರಾಗೃಹ ವಾಸ ಮತ್ತು 10 ಸಾವಿರ ರೂಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಐಪಿಸಿ 506 ರ ಕಲಂ ಅಡಿಯಲ್ಲಿ 6 ತಿಂಗಳ ಸಜೆ ವಿಧಿಸಲಾಗಿದೆ. ಸರಕಾರದ ಪರವಾಗಿ ವಿಶೇಷ ಅಭಿಯೋಜಕರಾದ ಗಾಯತ್ರಿ ರಾಜು ವಾದ ಮಂಡಿಸಿದ್ದರು.







