ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಇಂದೂಧರ ಹೊನ್ನಾಪುರ ಆಯ್ಕೆ

ಇಂದೂಧರ ಹೊನ್ನಾಪುರ
ಮೈಸೂರು,ನ.13: ಡಿಸೆಂಬರ್ ತಿಂಗಳಿನಲ್ಲಿ ಪಿರಿಯಾಪಟ್ಟಣದಲ್ಲಿ ನಡೆಯಲಿರುವ 16ನೇ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಹಿರಿಯ ಪತ್ರಕರ್ತ, ಸಾಹಿತಿ ಇಂದೂಧರ ಹೊನ್ನಾಪುರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ ತಿಳಿಸಿದ್ದಾರೆ.
ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ತಾಲೂಕಿನ ಎಲ್ಲಾ ಅಧ್ಯಕ್ಷರು ಮತ್ತು ಜಿಲ್ಲಾ ಕಸಾಪ ಪದಾಧಿಕಾರಿಗಳು ಭಾಗವಹಿಸಿದ್ದರು. 16ನೇ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿ.22, 23 ರಂದು ಪಿರಿಯಾಪಟ್ಟಣದಲ್ಲಿ ಆಯೋಜಿಸಲಾಗಿದ್ದು, ಜಿಲ್ಲಾ ಸಮ್ಮೇಳನದ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಹಲವಾರು ಹೆಸರುಗಳು ಚರ್ಚೆಗೆ ಒಳಪಟ್ಟು ಅಂತಿಮವಾಗಿ ಪಿರಿಯಾಪಟ್ಟಣ ತಾಲೂಕಿನವರೇ ಆದ ಹಿರಿಯ ಪತ್ರಕರ್ತ ಮತ್ತು ಸಾಹಿತಿ ಇಂದೂಧರ ಹೊನ್ನಾಪುರ ಅವರನ್ನು ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ರಾಜಣ್ಣ ತಿಳಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಹೊನ್ನಾಪುರ ಗ್ರಾಮದಲ್ಲಿ ಜನಿಸಿದ ಇಂದೂಧರ ಅವರು ಮೈಸೂರು ವಿವಿಯಲ್ಲಿ ಸ್ನಾತಕ ಪೂರ್ವ ಶಿಕ್ಷಣ ಮುಗಿಸಿದವರು. ವಿದ್ಯಾರ್ಥಿ ದಿಸೆಯಲ್ಲಿಯೇ 'ಪಂಚಮ' ಎಂಬ ಪತ್ರಿಕೆಯನ್ನು ಹೊರತಂದು ದಲಿತ ಚಳವಳಿಯಲ್ಲಿ ಗುರುತಿಸಿಕೊಂಡವರು. ರಾಜ್ಯಮಟ್ಟದ ಪತ್ರಿಕೆಗಳಲ್ಲಿ ವರದಿಗಾರರಾಗಿ, ವಿವಿಧ ಸ್ಥಾನಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಮಾಧ್ಯಮಗಳಲ್ಲಿ ಸಮಕಾಲೀನ ಸಾಮಾಜಿಕ ಹಾಗೂ ರಾಜಕೀಯ ವಿಶ್ಲೇಷಣೆಕಾರರಾಗಿಯೂ ಕೆಲಸ ಮಾಡಿದ್ದಾರೆ. ಇವರಿಗೆ 2016ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ. ಖಾದ್ರಿ ಶಾಮಣ್ಣ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿಗಳೂ ಲಭಿಸಿವೆ.
'ಬಂಡಾಯ' ಕವನ ಸಂಕಲನ, 'ಹೊಸದಿಕ್ಕು' ಆಯ್ದ ಲೇಖನಗಳ ಸಂಕಲನ ಪ್ರಕಟಗೊಂಡಿದೆ. ಇವರ ಕಥೆ, ಕವನಗಳು, ಲೇಖನಗಳನ್ನು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇದಲ್ಲದೆ ಸಾಮಾಜಿಕ ಕ್ಷೇತ್ರದಲ್ಲಿ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷರಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೇವೆಯನ್ನು ನೀಡುತ್ತಿದ್ದಾರೆ. ಬೆಂಗಳೂರಿನ ಬಡ ವಿದ್ಯಾರ್ಥಿ ಯುವ ಜನರಿಗಾಗಿ ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರ, ವಿವಿಧೋದ್ದೇಶ ಸ್ವಯಂ ಉದ್ಯೋಗ ತರಬೇತಿ ಕೇಂದ್ರ ಸ್ಥಾಪಿಸಿದ್ದಾರೆ.
2010ರಲ್ಲಿ ಪಿರಿಯಾಪಟ್ಟಣದಲ್ಲಿ ನಡೆದ ಮೈಸೂರು ಜಿಲ್ಲಾ 10ನೇ ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕಿನವರೇ ಆದ ಜಾನಪದ ವಿದ್ವಾಂಸ ಡಾ. ಪಿ.ಕೆ. ರಾಜಶೇಖರ್ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.







