ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ, ಸೋನಿಯಾರಿಂದ ನೆಹರೂ ಅವರಿಗೆ ಶ್ರದ್ಧಾಂಜಲಿ

ಹೊಸದಿಲ್ಲಿ, ನ.14: ಭಾರತದ ಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರ 129ನೇ ಜನ್ಮದಿನಾಚರಣೆ ಪ್ರಯುಕ್ತ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತಿತರ ಗಣ್ಯರು ಶ್ರದ್ದಾಂಜಲಿ ಸಲ್ಲಿಸಿದ್ದಾರೆ.
ಪ್ರಥಮ ಪ್ರಧಾನಿ ನೆಹರೂ ಜನ್ಮದಿನಾಚರಣೆಯ ಸಂದರ್ಭ ಅವರನ್ನು ಸ್ಮರಿಸುತ್ತೇವೆ ಎಂದು ರಾಷ್ಟ್ರಪತಿ ಕೋವಿಂದ್ ಟ್ವೀಟ್ ಮಾಡಿದ್ದಾರೆ. ಪ್ರಥಮ ಪ್ರಧಾನಿ ನೆಹರೂ ಸ್ವಾತಂತ್ರ್ಯ ಹೋರಾಟದಲ್ಲಿ ಹಾಗೂ ಪ್ರಧಾನಿಯಾಗಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಶಾಂತಿವನದಲ್ಲಿರುವ ನೆಹರೂ ಸ್ಮಾರಕದಲ್ಲಿ ತ್ರಿವರ್ಣದ ಬಲೂನುಗಳನ್ನು ಹಾರಿಸಲಾಯಿತು ಹಾಗೂ ಶಾಲಾ ಮಕ್ಕಳು ದೇಶಭಕ್ತಿ ಗೀತೆಗಳನ್ನು ಹಾಡಿದರು. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ನೇತೃತ್ವದಲ್ಲಿ ದೇಶದ ಪ್ರಥಮ ಪ್ರಧಾನಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಹಿರಿಯ ಬಿಜೆಪಿ ಮುಖಂಡ ಎಲ್ .ಕೆ.ಅಡ್ವಾಣಿ, ಕಾಂಗ್ರೆಸ್ ಮುಖಂಡರಾದ ಗುಲಾಮ್ ನಬಿ ಆಝಾದ್, ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ವಿಜಯ್ ಗೋಯೆಲ್, ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತಿತರರು ಶ್ರದ್ಧಾಂಜಲಿ ಸಲ್ಲಿಸಿದರು.





