ಫ್ಯಾಶನ್ ಡಿಸೈನರ್, ಕೆಲಸದಾಳುವಿನ ಹತ್ಯೆ
ಹೊಸದಿಲ್ಲಿ, ನ.15: ಫ್ಯಾಶನ್ ಡಿಸೈನರ್ ಹಾಗೂ ಆಕೆಯ ಕೆಲಸದಾಳುವನ್ನು ಕೊಲೆಗೈದ ಘಟನೆ ದಕ್ಷಿಣದಿಲ್ಲಿಯ ವಸಂತ್‌ಕುಂಜ್ ಎಂಬಲ್ಲಿ ಬುಧವಾರ ರಾತ್ರಿ ನಡೆದಿದ್ದು ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಪೊಲೀಸ್ ಠಾಣೆಗೆ ತೆರಳಿದ ಮೂವರು ವ್ಯಕ್ತಿಗಳು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. 53 ವರ್ಷದ ಫ್ಯಾಶನ್ ಡಿಸೈನರ್ ಮಾಲಾ ಲಖಾನಿ ಹಾಗೂ ಕೆಲಸದಾಳು ಮೃತಪಟ್ಟವರು. ಮಾಯಾರ ಮೃತದೇಹ ಬೆಡ್‌ರೂಂನಲ್ಲಿ ಹಾಗೂ ಕೆಲಸದಾಳುವಿನ ಮೃತದೇಹ ಮನೆಯ ಹಾಲ್‌ನಲ್ಲಿ ಕಂಡುಬಂದಿದ್ದು ಮಾಲಾ ಲಖಾನಿ ದೇಹದ ಮೇಲೆ 7 ಗಾಯದ ಗುರುತುಗಳಿದ್ದವು. ರಾತ್ರಿ ಮಾಲಾ ಮನೆಯಲ್ಲಿ ಕಾವೇರಿದ ಮಾತುಕತೆ ನಡೆಯುತ್ತಿತ್ತು ಎಂದು ಗುರುವಾರ ಬೆಳಿಗ್ಗೆ ನೆರೆಮನೆಯವರು ದೂರು ನೀಡಿದಾಗ ಪೊಲೀಸ್ ತನಿಖೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ತಪ್ಪೊಪ್ಪಿಕೊಂಡಿರುವ ಆರೋಪಿಗಳಲ್ಲಿ ರಾಹುಲ್ ಎಂಬಾತ ಮಾಲಾ ಲಖಾನಿ ವಿನ್ಯಾಸಗೊಳಿಸಿದ ಫ್ಯಾಶನ್ ಬಟ್ಟೆಗಳನ್ನು ಹೊಲಿದುಕೊಡುವ ಟೈಲರ್ ಆಗಿದ್ದ. ಬುಧವಾರ ರಾತ್ರಿ ತಾನು ಹೊಲಿದಿರುವ ಬಟ್ಟೆಗಳನ್ನು ಮಾಲಾರಿಗೆ ತೋರಿಸುವ ನೆಪದಲ್ಲಿ ಮನೆಯನ್ನು ಪ್ರವೇಶಿಸಿದ್ದ ರಾಹುಲ್, ಇನ್ನಿಬ್ಬರ ಸಹಾಯದಿಂದ ಮಾಲಾರನ್ನು ಚೂರಿಯಿಂದ ಇರಿದಿದ್ದ. ಮಾಲಾ ಬೊಬ್ಬೆ ಹೊಡೆದಾಗ ಕೆಲಸದಾಳು ಬಹಾದುರ್ ಸಹಾಯಕ್ಕಾಗಿ ಧಾವಿಸಿದ್ದು ಆತನನ್ನೂ ಕೊಲೆ ಮಾಡಿದ್ದಾರೆ . ಕೊಲೆಗೈದ ಬಳಿಕ ಮನೆಯಲ್ಲಿದ್ದ ಕಾರನ್ನು ರಾಹುಲ್ ಕೊಂಡೊಯ್ದಿದ್ದು ಅದನ್ನೂ ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.