ಅಫ್ರಿದಿ ಹೇಳಿಕೆಗೆ ರಾಜ್‌ನಾಥ್ ಸಿಂಗ್ ಮೆಚ್ಚುಗೆ

ಹೊಸದಿಲ್ಲಿ, ನ. 15: ಕಾಶ್ಮೀರ ಕುರಿತು ಪಾಕಿಸ್ತಾನದ ಕ್ರಿಕೆಟಿಗ ಶಾಹಿದ್ ಅಫ್ರಿದಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರು, ಅಫ್ರಿದಿ ಹೇಳಿದ್ದು ಸರಿಯಾಗಿಯೇ ಇದೆ. ಪಾಕಿಸ್ತಾನಕ್ಕೆ ತನ್ನ ಪ್ರಾಂತ್ಯವನ್ನೇ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಕಾಶ್ಮೀರವನ್ನು ಹೇಗೆ ಸಂಭಾಳಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.
ರಾಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಕಾಶ್ಮೀರ ಬೇಕಾಗಿಲ್ಲ. ಆದರೆ, ರಾಜಕೀಯ ವಿಷಯಕ್ಕಾಗಿ ಪಾಕಿಸ್ತಾನ ಕಾಶ್ಮೀರವನ್ನು ಹಿಡಿದುಕೊಂಡು ಜಗ್ಗಾಡುತ್ತಿದೆ. ಪಾಕಿಸ್ತಾನದ ಕ್ರಿಕೆಟಿಗ ಶಾಹಿದ್ ಅಫ್ರಿದಿ ನೀಡಿದ ಹೇಳಿಕೆ ಸರಿಯಾಗಿಯೇ ಇದೆ. ಪಾಕಿಸ್ತಾನಕ್ಕೆ ತನ್ನ ಪ್ರಾಂತ್ಯಗಳನ್ನೇ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಕಾಶ್ಮೀರವನ್ನು ಹೇಗೆ ಸಂಭಾಳಿಸುತ್ತಾರೆ. ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗವಾಗಿ ರುತ್ತದೆ ಎಂದರು.
ವೈರಲ್ ವೀಡಿಯೋ ಒಂದರಲ್ಲಿ ಅಫ್ರಿದಿ, ಪಾಕಿಸ್ತಾನ ನಾಲ್ಕು ಪ್ರಾಂತ್ಯಗಳನ್ನು ಸಂಭಾಳಿಸಲೇ ಹರ ಸಾಹಸಪಡುತ್ತಿದೆ. ಅದು ಕಾಶ್ಮೀರವನ್ನು ಬಯಸಲಾರದು ಎಂದು ಹೇಳಿರುವುದು ದಾಖಲಾಗಿದೆ. ಬ್ರಿಟಿಶ್ ಪಾರ್ಲಿಮೆಂಟಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅಫ್ರಿದಿ, ಪಾಕಿಸ್ತಾನ ಕಾಶ್ಮೀರವನ್ನು ಬಯಸುತ್ತಿಲ್ಲ, ಪಾಕಿಸ್ತಾನಕ್ಕೆ ತನ್ನ ನಾಲ್ಕು ಪ್ರಾಂತ್ಯಗಳನ್ನೇ ಸಂಭಾಳಿಸಲು ಸಾಧ್ಯ ಆಗುತ್ತಿಲ್ಲ ಎಂದು ಹೇಳಿದ್ದರು. ‘‘ಪಾಕಿಸ್ತಾನ ಕಾಶ್ಮೀರವನ್ನು ಬಯಸುವುದಿಲ್ಲ. ಅದನ್ನು ಭಾರತಕ್ಕೆ ಕೂಡ ನೀಡುವುದಿಲ್ಲ. ಪಾಕಿಸ್ತಾನಕ್ಕೆ ತನ್ನ ಪ್ರಾಂತ್ಯಗಳನ್ನೇ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಕಾಶ್ಮೀರವನ್ನು ಸ್ವತಂತ್ರವಾಗಿ ಬಿಡಿ. ಕನಿಷ್ಠ ಮಾನವೀಯತೆಯಾದರೂ ನೆಲೆಸಲಿ. ಜನರು ಸಾವನ್ನಪ್ಪದೇ ಇರಲು ಬಿಟ್ಟುಬಿಡಿ’’ ಎಂದು ಅಫ್ರಿದಿ ಹೇಳಿದ್ದರು.