ಖಶೋಗಿ ಹತ್ಯೆಯಲ್ಲಿ ಸೌದಿ ಸಲಹೆಗಾರ, ಗುಪ್ತಚರ ಅಧಿಕಾರಿ ಭಾಗಿ
5 ಆರೋಪಿಗಳಿಗೆ ಮರಣದಂಡನೆಗೆ ಪ್ರಾಸಿಕ್ಯೂಶನ್ ಆಗ್ರಹ

ರಿಯಾದ್, ನ. 15: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯವರ ಹತ್ಯೆಯಲ್ಲಿ ಸೌದಿ ದೊರೆಯ ಓರ್ವ ಸಲಹೆಗಾರ ಹಾಗೂ ಓರ್ವ ಹಿರಿಯ ಗುಪ್ತಚರ ಅಧಿಕಾರಿ ಮಹತ್ವದ ಪಾತ್ರ ವಹಿಸಿದ್ದಾರೆ ಹಾಗೂ ಹತ್ಯೆಯಲ್ಲಿ ಶಾಮೀಲಾಗಿರುವುದನ್ನು ಒಪ್ಪಿಕೊಂಡಿರುವ ಐದು ಮಂದಿಗೆ ಮರಣ ದಂಡನೆಗಾಗಿ ಸರಕಾರ ಆಗ್ರಹಿಸಿದೆ.
ಈ ವಿಷಯವನ್ನು ಸೌದಿ ಅರೇಬಿಯದ ಉಪ ಅಟಾರ್ನಿ ಜನರಲ್ ಶಾಲನ್ ಶಾಲನ್ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು. ಈ ಪತ್ರಿಕಾಗೋಷ್ಠಿಯು ಟಿವಿಯಲ್ಲಿ ನೇರಪ್ರಸಾರಗೊಂಡಿತು.
ಟರ್ಕಿ ದೇಶದ ನಗರ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ಅಕ್ಟೋಬರ್ 2ರಂದು ನಡೆದ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಟೀಕಾಕಾರ ಖಶೋಗಿಯ ಹತ್ಯೆಗೆ ಸಂಬಂಧಿಸಿ ಬಂಧಿಸಲಾಗಿರುವ 21 ಮಂದಿಯ ಪೈಕಿ 11 ಜನರ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ.
ಸೌದಿ ಅರೇಬಿಯದ ದೈನಂದಿನ ವ್ಯವಹಾರಗಳನ್ನು ನಡೆಸುವ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ಗೆ ಈ ಕಾರ್ಯಾಚರಣೆಯ ಮಾಹಿತಿ ಇರಲಿಲ್ಲ ಎಂದು ಶಾಲನ್ ಶಾಲನ್ ಹೇಳಿಕೊಂಡರು.
ಖಶೋಗಿ ಹತ್ಯೆಗೆ ಜಾಗತಿಕ ಆಕ್ರೋಶ ವ್ಯಕ್ತವಾಗಿದೆ ಹಾಗೂ ಹತ್ಯೆಯ ಹಿಂದೆ ಸೌದಿಯ ಪ್ರಭಾವಿ ಯುವರಾಜ ಇದ್ದಾರೆ ಎಂಬ ಆರೋಪಗಳು ಕೇಳಿಬಂದಿರುವುದನ್ನು ಸ್ಮರಿಸಬಹುದಾಗಿದೆ.
ಖಶೋಗಿಯನ್ನು ಅಪಹರಿಸುವ ಪ್ರಯತ್ನ ವಿಕೋಪಕ್ಕೆ ಹೋದ ಬಳಿಕ ಅವರ ಹತ್ಯೆ ಸಂಭವಿಸಿತು ಎಂಬ ತನ್ನ ನಿಲುವಿಗೆ ಸೌದಿ ಅರೇಬಿಯ ಅಂಟಿಕೊಂಡಿದೆ.
ಹತ್ಯೆಗೆ ಆದೇಶ ನೀಡಿದವರು ಮತ್ತು ಆದೇಶವನ್ನು ಜಾರಿಗೊಳಿಸಿದವರಿಗೆ ಮರಣ ದಂಡನೆ ವಿಧಿಸಬೇಕೆಂದು ಪ್ರಾಸಿಕ್ಯೂಶನ್ ಕೋರಿದೆ ಎಂದರು.







