ತಮಿಳುನಾಡಿನಲ್ಲಿ 'ಗಜ' ಘರ್ಜನೆ: ಜನಜೀವನ ಅಸ್ತವ್ಯಸ್ತ
ಚೆನ್ನೈ, ನ.16: 'ಗಜ' ಚಂಡಮಾರುತದ ಆರ್ಭಟಕ್ಕೆ ತಮಿಳುನಾಡು ನಲುಗಿದೆ. ಭಾರಿ ಮಳೆ ಮತ್ತು ಬಿರುಗಾಳಿಯಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ತಮಿಳುನಾಡು ಕರಾವಳಿಯಲ್ಲಿ ಹಲವು ಮನೆಗಳಿಗೆ ಹಾನಿಯಾಗಿದ್ದು, ಹಲವೆಡೆ ಮರಗಳು ಉರುಳಿವೆ. ಶುಕ್ರವಾರ ಮುಂಜಾನೆ ಚಂಡಮಾರುತ ನಾಗಪಟ್ಟಿನಂ ಜಿಲ್ಲೆ ಪ್ರವೇಶಿಸಿದೆ.
ಗಾಳಿಯ ತೀವ್ರತೆ ಮತ್ತಷ್ಟು ಬಿರುಸಾಗುವ ಮುನ್ನ ಬೆಳಗ್ಗಿನ ಜಾವ ಒಂದಷ್ಟು ಕಡಿಮೆಯಾಗಿತ್ತು ಎಂದು ಚೆನ್ನೈ ಹವಾಮಾನ ಇಲಾಖೆ ಹೇಳಿದೆ. ದಕ್ಷಿಣ ತಮಿಳುನಾಡಿನ ಕರಾವಳಿ ಪ್ರದೇಶದಿಂದ ಸುಮಾರು 26 ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಸಾವಿರಾರು ಮಂದಿ ಪರಿಹಾರ ಕಾರ್ಯಾಚರಣೆ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಸುಮಾರು 100- 120 ಕಿಲೋಮೀಟರ್ ವೇಗದ ಗಾಳಿ ನೆಲಮಟ್ಟ ತಲುಪಿದ್ದು, ನಾಗಪಟ್ಟಿಣಂ, ಕರೈಕಲ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಗಾಳಿ ಮತ್ತು ವಾತಾವರಣದ ಒತ್ತಡದಿಂದಾಗಿ ಸಮುದ್ರದ ತೆರೆಗಳ ಮಟ್ಟ ಕೂಡಾ ಸುಮಾರು ಒಂದು ಮೀಟರ್ನಷ್ಟು ಅಧಿಕವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಎಲ್ಲ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ನೆಲಮಟ್ಟಕ್ಕೆ ಕುಸಿದ ಬಳಿಕವೂ ಗಜ ಚಂಡಮಾರುತ ಪ್ರಭಾವ ಸ್ವಲ್ಪಮಟ್ಟಿಗೆ ಇರಲಿದ್ದು, 60 ರಿಂದ 70 ಕಿಲೋಮೀಟರ್ ವೇಗದಲ್ಲಿ ತಮಿಳುನಾಡಿನ ಒಳನಾಡು ಪ್ರದೇಶಗಳಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.