ಮಂಗಳೂರು ಹಜ್ ಭವನ ಶೀಘ್ರ ನಿರ್ಮಾಣ: ಸಚಿವ ಝಮೀರ್ ಅಹ್ಮದ್

ಮಂಗಳೂರು, ನ.16: ನಗರದ ಹೊರವಲಯ ಅಡ್ಯಾರ್‌ನಲ್ಲಿ ಜಾಗವನ್ನು ಗುರುತಿಸಿ ಶೀಘ್ರದಲ್ಲಿಯೇ ಹಜ್ ಭವನವನ್ನು ನಿರ್ಮಾಣ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪಸಂಖ್ಯಾತರ ಮತ್ತು ವಕ್ಫ್ ಇಲಾಖೆ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶುಕ್ರವಾರ ನಡೆದ ಆಹಾರ ಇಲಾಖೆ, ಕಾನೂನು ಮಾಪನಶಾಸ್ತ್ರ, ಅಲ್ಪಸಂಖ್ಯಾತರ ಮತ್ತು ವಕ್ಫ್ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಡ್ಯಾರ್‌ನಲ್ಲಿನ ಜಾಗವನ್ನು ಮೊದಲು ಸರ್ವೇ ಮಾಡಿಸಲಾಗುವುದು. ಬಳಿಕ ಸರಕಾರವು ಆ ಜಾಗವನ್ನು ಸ್ವಾಧೀನಕ್ಕೆ ಪಡೆದುಕೊಂಡು ಹಜ್ ಭವನವನ್ನು ನಿರ್ಮಿಸಲಾಗುವುದು ಎಂದರು.
ಜಿಲ್ಲೆಯ 16 ಕಡೆ ನ್ಯಾಯಬೆಲೆ ಅಂಗಡಿಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಪಿಒಎಸ್ (ಪಾಯಿಂಟ್ ಆಫ್ ಸೇಲ್) ಅಳವಡಿಸದೇ ಕೂಪನ್ ಮೂಲಕ ಪಡಿತರ ವಿತರಿಸಲಾಗುತ್ತಿದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಸಚಿವರು ತಿಳಿಸಿದರು.
ನ್ಯಾಯಬೆಲೆ ಅಂಗಡಿಗಳ ಮಾಲಕರೇ 20-25 ಸಾವಿರ ರೂ. ವೆಚ್ಚದಲ್ಲಿ ಕಂಪ್ಯೂಟರ್, ಪ್ರಿಂಟರ್, ಲ್ಯಾಪ್‌ಟಾಪ್, ಪಿಒಎಸ್ ಮತ್ತಿತರ ಸಲಕರಣೆ ಅಳವಡಿಸಿಕೊಂಡು ಪಡಿತರ ವಿತರಿಸುತ್ತಿದ್ದಾರೆ. ಕೆಲವೊಮ್ಮೆ ನ್ಯಾಯಬೆಲೆ ಅಂಗಡಿಯವರೇ ನೆಟ್‌ವರ್ಕ್ ಬರುತ್ತಿಲ್ಲ, ಕಾರ್ಡ್ ಕೊಡಲಾಗುವುದಿಲ್ಲ ಎಂದು ನೆಪ ಹೇಳಿ ಜನರಿಗೆ ತೊಂದರೆ ಕೊಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಈ ಪದ್ಧತಿಯನ್ನು ಕೈಬಿಟ್ಟು ಸರಕಾರದಿಂದಲೇ ಖಾಸಗಿ ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡು ನೆಟ್‌ವರ್ಕ್ ಸಮಸ್ಯೆ ಬಗೆಹರಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
‘ಇಲಾಖೆಯಿಂದ 1,586 ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದ್ದು, ಮೊದಲ ಹಂತದಲ್ಲಿ 1,349 ಫಲಾನುಭವಿಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲು ಏಜೆನ್ಸಿಗೆ ಅನುದಾನವೂ ಜಮೆ ಮಾಡಲಾಗಿದೆ. 824 ಸ್ಟವ್‌ಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. 581 ಫಲಾನುಭವಿಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ’ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅನಿಲ ಭಾಗ್ಯ ಯೋಜನೆಯಡಿ ನವೆಂಬರ್ ಅಂತ್ಯದೊಳಗೆ ಸಂಪೂರ್ಣ ಗುರಿಯನ್ನು ತಲುಪಿ ಎಲ್ಲ ಫಲಾನುಭವಿಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಬೇಕು. ಬಾಕಿ ಇರುವ 768 ಗ್ಯಾಸ್ ಸಂಪರ್ಕವನ್ನು ಶೀಘ್ರದಲ್ಲೇ ಫಲಾನುಭವಿಗಳಿಗೆ ನೀಡಬೇಕು ಎಂದು ಸೂಚಿಸಿದರು.
ಹೊಸ ಪಡಿತರ ಚೀಟಿಯಲ್ಲಿ ಹೆಸರನ್ನು ಸೇರ್ಪಡೆಗೊಳಿಸುವುದು, ತಿದ್ದುಪಡಿ ಕೋರಿ ಸಲ್ಲಿಸಿರುವ ಅರ್ಜಿದಾರರಿಗೆ ಪಡಿತರ ಚೀಟಿಗಳು ಮುದ್ರಣವಾಗಿ ತಲುಪುತ್ತಿಲ್ಲ. ಇದು ಸಕಾಲದಲ್ಲಿ ಬರುತ್ತಿಲ್ಲ ಎನ್ನುವುದನ್ನು ಅಧಿಕಾರಿಗಳು ಸಚಿವರ ಗಮನ ಸೆಳೆದರು. ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು. ಹೊಸ ಪಡಿತರಕ್ಕೆ ಸಂಬಂಧಿಸಿದಂತೆ 7,009 ಅರ್ಜಿಗಳು ಬಾಕಿ ಉಳಿದಿದ್ದು, ತ್ವರಿತವಾಗಿ ಅರ್ಜಿಗಳನ್ನು ಪರಿಹರಿಸಿ ಅರ್ಹರಿಗೆ ಪಡಿತರ ಕಾರ್ಡ್‌ಗಳನ್ನು ವಿತರಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ತೊಗರಿ ಬೇಳೆ ಬೇಡಿಕೆ ಕಡಿಮೆಯಿದ್ದು, ಬದಲಾಗಿ ಹೆಸರು ಬೇಳೆಗೆ ಬೇಡಿಕೆ ಇದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ಸ್ಥಳೀಯ ಬೇಡಿಕೆಯಂತೆಯೇ ಧಾನ್ಯ ನೀಡಲಾಗುವುದು. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಹಕರಿಗೆ ಪಡಿತರ ವಿತರಣೆಯಲ್ಲಿ ಅಳತೆ ಮತ್ತು ತೂಕದಲ್ಲಿ ಲೋಪದೋಷ ಉಂಟಾಗುತ್ತಿದೆ ಎನ್ನುವ ದೂರುಗಳು ಬಂದಿದ್ದು, ಈ ಬಗ್ಗೆ ಅಧಿಕಾರಿಗಳನ್ನು ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು.
ಸಿಬ್ಬಂದಿ ಕೊರತೆ: ಜಿಲ್ಲೆಯ ಆಹಾರ ಇಲಾಖೆಯಲ್ಲಿ 9 ಸಿಬ್ಬಂದಿಯ ಕೊರತೆಯಿದೆ. ಯೋಜನೆಗಳನ್ನು ಜಾರಿಗೆ ತರುವಲ್ಲಿ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಸಿಬ್ಬಂದಿ ಕೊರತೆ ಸಮಸ್ಯೆ ನಿವಾರಿಸಲು ಇಲಾಖೆಯ ಆಯುಕ್ತರನ್ನು ಸಂಪರ್ಕಿಸಿ ಸಮಾಲೋಚನೆ ನಡೆಸುವುದಾಗಿ ಸಚಿವರು ಭರವಸೆ ನೀಡಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಇಲಾಖೆಯ ಜಿಲ್ಲಾ ಅಧಿಕಾರಿ ಶ್ರೀನಿವಾಸಯ್ಯ, ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಉಸ್ಮಾನ್, ವಕ್ಫ್ ಜಿಲ್ಲಾ ಅಧಿಕಾರಿ ಅಬೂಬಕರ್, ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ಶ್ರೀಧರ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು. .