ಜೈಲಿನಿಂದ ತಾನೇ ಬಿಡಿಸಿದ ವ್ಯಕ್ತಿಯಿಂದಲೇ ಕೊಲೆಯಾದ ಫ್ಯಾಶನ್ ಡಿಸೈನರ್
![ಜೈಲಿನಿಂದ ತಾನೇ ಬಿಡಿಸಿದ ವ್ಯಕ್ತಿಯಿಂದಲೇ ಕೊಲೆಯಾದ ಫ್ಯಾಶನ್ ಡಿಸೈನರ್ ಜೈಲಿನಿಂದ ತಾನೇ ಬಿಡಿಸಿದ ವ್ಯಕ್ತಿಯಿಂದಲೇ ಕೊಲೆಯಾದ ಫ್ಯಾಶನ್ ಡಿಸೈನರ್](https://www.varthabharati.in/sites/default/files/images/articles/2018/11/16/163524.jpg)
ಹೊಸದಿಲ್ಲಿ, ನ.16: ಬಾಲಕಿಗೆ ಲೈಂಗಿಕ ಪೀಡನೆ ನೀಡಿದ್ದ ಆರೋಪದಲ್ಲಿ ಜೈಲಿನಲ್ಲಿದ್ದ ವ್ಯಕ್ತಿಯನ್ನು ಜಾಮೀನು ನೀಡಿ ಬಿಡುಗಡೆಗೊಳಿಸಿದ ತನ್ನ ಸಹೋದರಿಯನ್ನೇ ಆತ ಚೂರಿಯಿಂದ ತಿವಿದು ಕೊಲೆ ಮಾಡಿದ್ದಾನೆ ಎಂದು ಬುಧವಾರ ರಾತ್ರಿ ಕೊಲೆಯಾದ ಫ್ಯಾಶನ್ ಡಿಸೈನರ್ ಮಾಲಾ ಲಖಾನಿಯ ಸಹೋದರಿ ಹೇಳಿದ್ದಾರೆ.
53 ವರ್ಷದ ಮಾಲಾ ಲಖಾನಿ ಹಾಗೂ ಅವರ ಕೆಲಸದಾಳು ಬಹಾದುರ್ನನ್ನು ಮೂವರು ಆರೋಪಿಗಳಾದ ರಾಹುಲ್ ಅನ್ವರ್, ಆತನ ಸಂಬಂಧಿ ರಹಮತ್ ಹಾಗೂ ಸ್ನೇಹಿತ ವಾಸಿಂ ಎಂಬವರು ಚೂರಿಯಿಂದ ಇರಿದು ಹತ್ಯೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಮಾಲಾ ಲಖಾನಿ ವಿನ್ಯಾಸಗೊಳಿಸಿದ ಬಟ್ಟೆಯನ್ನು ಟೈಲರ್ ವೃತ್ತಿಯ ರಾಹುಲ್ ಅನ್ವರ್ ಹೊಲಿದು ಕೊಡುತ್ತಿದ್ದ. 2017ರಲ್ಲಿ ರಾಹುಲ್ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಪೀಡನೆ ನೀಡಿದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ. ಆಗ ಆತನನ್ನು ಮಾಲಾ ಸೆರೆಯಿಂದ ಬಿಡಿಸಿದ್ದರಲ್ಲದೆ, ಆತನಿಗೆ ಕೆಲಸ ಮಾಡಲು ಅನುಕೂಲವಾಗಲೆಂದು ಸ್ಕೂಟರನ್ನೂ ತೆಗೆಸಿಕೊಟ್ಟಿದ್ದರು. ಆದರೆ ಇದೆಲ್ಲವನ್ನೂ ಮರೆತ ರಾಹುಲ್, ತನ್ನ ಸ್ನೇಹಿತರ ಜೊತೆಗೂಡಿ ಮಾಲಾರನ್ನು ಬರ್ಬರವಾಗಿ ಇರಿದು ಕೊಲೆ ಮಾಡಿದ್ದಾನೆ ಎಂದು ಮಾಲಾರ ಸಹೋದರಿ ಆರತಿ ಶರ್ಮ ಸುದ್ದಿಸಂಸ್ಥೆಯೊಂದಿಗೆ ಮಾತಾಡುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಲೆಯಾದ ದಿನವಾದ ಬುಧವಾರ ರಾತ್ರಿ ಸುಮಾರು 9:50ರ ವರೆಗೆ ತಾನು ಆಕೆಯೊಂದಿಗೆ ಮೊಬೈಲ್ನಲ್ಲಿ ಮಾತಾಡುತ್ತಿದ್ದೆ. ಬಳಿಕ ಟಿವಿ ಕಾರ್ಯಕ್ರಮ ನೋಡಲಿರುವ ಕಾರಣ ಮತ್ತೆ ಮಾತಾಡುತ್ತೇನೆ ಎಂದು ಆಕೆ ಫೋನ್ ಕಟ್ ಮಾಡಿದ್ದಳು. ಆದರೆ ಮರಳಿ ಕರೆ ಮಾಡಲೇ ಇಲ್ಲ ಎಂದು ಆರತಿ ಹೇಳಿದ್ದಾರೆ.