ನೋಟು ನಿಷೇಧ ಅತ್ಯಂತ ನೀತಿಯುತವಾಗಿತ್ತು, ರಾಜಕೀಯ ನಡೆಯಾಗಿರಲಿಲ್ಲ: ಅರುಣ್ ಜೇಟ್ಲಿ
ಭೋಪಾಲ,ನ.17: ನೋಟು ನಿಷೇಧವು ಅತ್ಯಂತ ನೀತಿಯುತ ಕ್ರಮವಾಗಿತ್ತೇ ಹೊರತು ರಾಜಕೀಯ ನಡೆಯಾಗಿರಲಿಲ್ಲ ಎಂದು ಕೇಂದ್ರ ವಿತ್ತಸಚಿವ ಅರುಣ್ ಜೇಟ್ಲಿ ಅವರು ಶನಿವಾರ ಇಲ್ಲಿ ಪ್ರತಿಪಾದಿಸಿದರು.
ನ.28ರಂದು ನಡೆಯಲಿರುವ ಮಧ್ಯಪ್ರದೇಶ ಚುನಾವಣೆಗಾಗಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಜೇಟ್ಲಿ ನೋಟು ನಿಷೇಧ ಕ್ರಮವನ್ನು ಸಮರ್ಥಿಸಿಕೊಂಡರು.
ನೋಟು ನಿಷೇಧ ಕ್ರಮದಿಂದಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರ ಸಂಖ್ಯೆಯು ಹೆಚ್ಚಾಗಿದೆ ಮತ್ತು ರಾಜ್ಯಗಳು ಹಾಗೂ ಕೇಂದ್ರದ ಆದಾಯಗಳಲ್ಲಿ ತೀವ್ರ ಏರಿಕೆಯಾಗಿದೆ ಎಂದು ಅವರು ತಿಳಿಸಿದರು.
ನೋಟು ನಿಷೇಧ ಕುರಿತಂತೆ ಶುಕ್ರವಾರ ಚುನಾವಣಾ ರ್ಯಾಲಿಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ತೀವ್ರ ಜಟಾಪಟಿ ನಡೆದಿತ್ತು. ನೋಟು ನಿಷೇಧವನ್ನು ಭಾರತದ ಅತಿ ದೊಡ್ಡ ಹಗರಣ ಎಂದು ರಾಹುಲ್ ಬಣ್ಣಿಸಿದ್ದರೆ, ‘ಒಂದು ಕುಟುಂಬ’ವನ್ನು ಹೊರತುಪಡಿಸಿದರೆ ನೋಟು ನಿಷೇಧದಿಂದ ಜನರಿಗೆ ಯಾವುದೇ ತೊಂದರೆಯಾಗಿರಲಿಲ್ಲ ಎಂದು ಮೋದಿ ಕುಟುಕಿದ್ದರು.