ಛತ್ತೀಸ್ಗಡ ಸಾರ್ವಜನಿಕ ಸಂಪರ್ಕ ಇಲಾಖೆಯ ಮುಖ್ಯಸ್ಥರ ಎತ್ತಂಗಡಿಗೆ ಚು.ಆಯೋಗ ಆದೇಶ

ಹೊಸದಿಲ್ಲಿ,ನ.17: ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಹಾಗೂ ಆಯುಕ್ತ ಎಸ್. ರಾಜೇಶ್ ಟೋಪ್ಪೊ ಅವರನ್ನು ಹುದ್ದೆಯಿಂದ ಎತ್ತಂಗಡಿ ಮಾಡುವಂತೆ ಚುನಾವಣಾ ಆಯೋಗವು ಛತ್ತೀಸ್ಗಡ ಸರಕಾರಕ್ಕೆ ನಿರ್ದೇಶ ನೀಡಿದೆ. ಟೋಪ್ಪೊ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಕುಟುಕು ಕಾರ್ಯಾಚರಣೆಗೆ ಹಣ ನೀಡುವುದಾಗಿ ಹೇಳಿರುವುದು ವೀಡಿಯೊದಲ್ಲಿ ಸೆರೆಯಾಗಿದ್ದು,ಈ ಹಿನ್ನೆಲೆಯಲ್ಲಿ ಆಯೋಗದ ಆದೇಶ ಹೊರಬಿದ್ದಿದೆ.
ಇಂತಹ ಹೇಳಿಕೆಗಳು ತಾರತಮ್ಯದ ವರ್ತನೆಯನ್ನು ಸೂಚಿಸುತ್ತವೆ ಮತ್ತು ಹಿರಿಯ ಸರಕಾರಿ ಅಧಿಕಾರಿಯೋರ್ವರು ಅನಾಗರಿಕ ಭಾಷೆಯನ್ನು ಬಳಸುವುದು ಉಚಿತವಲ್ಲ ಎಂದು ಆಯೋಗದ ವಕ್ತಾರರು ತಿಳಿಸಿದರು.
ಕಾಂಗ್ರೆಸ್ ಸದಸ್ಯರು ತಮ್ಮ ಪಕ್ಷದ ಹಿರಿಯ ನಾಯಕರೋರ್ವರನ್ನು ನಿಂದಿಸುತ್ತಿರುವ ವೀಡಿಯೊವನ್ನು ಚಿತ್ರೀಕರಿಸುವಂತೆ ಟೋಪ್ಪೆ ಪತ್ರಕರ್ತರೋರ್ವರಿಗೆ ಸೂಚಿಸುತ್ತಿರುವ ಮತ್ತು ಇದಕ್ಕಾಗಿ ತಾನು ಹಣವನ್ನು ನೀಡುವುದಾಗಿ ಹೇಳುತ್ತಿರುವ ದೃಶ್ಯ ವೀಡಿಯೊದಲ್ಲಿದೆ ಎನ್ನಲಾಗಿದೆ.
Next Story