ಸಚಿವ ಝಮೀರ್‌ರಿಂದ ಉಡುಪಿ ಬಿಷಪ್ ಭೇಟಿ

ಉಡುಪಿ, ನ.17: ರಾಜ್ಯದ ಅಲ್ಪಸಂಖ್ಯಾತ, ವಕ್ಫ್ ಮತ್ತು ಆಹಾರ, ನಾಗರಿಕ ಸರಬರಾಜು ಖಾತೆಯ ಸಚಿವ ಝಮೀರ್ ಅಹ್ಮದ್ ಖಾನ್ ಅವರು ಶನಿವಾರ ಉಡುಪಿ ಕೆಥೊಲಿಕ್ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಉಡುಪಿಯ ಕೆಎಂ ಮಾರ್ಗದಲ್ಲಿರುವ ಬಿಷಪ್ ಹೌಸಿಗೆ ಭೇಟಿ ನೀಡಿದ ಸಚಿವರನ್ನು ಧರ್ಮಾಧ್ಯಕ್ಷ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಧರ್ಮಪ್ರಾಂತದ ಪರವಾಗಿ ಹೂಗುಚ್ಚ ನೀಡಿ ಸ್ವಾಗತಿಸಿದರು. ಧರ್ಮಾಧ್ಯಕ್ಷರು ಕಳೆದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕಾರ್ಕಳ ಬೆಸಿಲಿಕಾ ಸೇರಿದಂತೆ ವಿವಿಧ ಚರ್ಚುಗಳ ಅಭಿವೃದ್ಧಿಗಾಗಿ ಕ್ರೈಸ್ತ ಅಭಿವೃದ್ಧಿ ಮಂಡಳಿಯಿಂದ ಮಂಜೂರಾದ ಹಣ ಇನ್ನೂ ಕೂಡ ಬಿಡುಗಡೆಯಾಗದಿರುವ ಕುರಿತು ಸಚಿವರ ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ಸಚಿವರು, ಕೂಡಲೇ ಎಲ್ಲಾ ಅನುದಾನವನ್ನು ಬಿಡುಗಡೆ ಗೊಳಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅತ್ತೂರು ಸಂತ ಲಾರೆನ್ಸ್ ಬಾಸಿಲಕಾದ ಪ್ರಧಾನ ಧರ್ಮಗುರು ವಂ. ಜೋರ್ಜ್ ಡಿಸೋಜಾ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕಾಂಗ್ರೆಸ್ ನಾಯಕರಾದ ಜಿ. ಎ. ಬಾವಾ, ಜನಾರ್ದನ ತೋನ್ಸೆ, ಎಂ.ಎ.ಗಫೂರ್ ಹಾಗೂ ಇತರ ನಾಯಕರು ಉಪಸ್ಥಿತರಿದ್ದರು.