ಮಲ್ಪೆ: ಬೋಟ್ ಚಾಲನೆ, ನಿರ್ವಹಣಾ ತರಬೇತಿ

ಉಡುಪಿ, ನ.17: ಮಲ್ಪೆಯ ಕರಾವಳಿ ಕಾವಲು ಪಡೆ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಘಟಕದ ಪೊಲೀಸ್ ಮತ್ತು ತಾಂತ್ರಿಕ ಸಿಬ್ಬಂದಿಗಳಿಗೆ ಬೋಟ್ ಚಾಲನೆ ಮತ್ತು ನಿರ್ವಹಣಾ ತರಬೇತಿಯನ್ನು ಗೋವಾ ಶಿಪ್‌ಯಾರ್ಡ್‌ನ ತಂತ್ರಜ್ಞ ಸಿರಿಲ್ ಎ. ಪೆರ್ನಾಂಡಿಸ್ ನಡೆಸಿಕೊಟ್ಟರು.
ನ.13ರಿಂದ 17ರವರೆಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ 5 ದಿನಗಳ ಕಾಲ ಸಿಬ್ಬಂದಿಗೆ ಬೋಟ್ ಚಾಲನೆ ಮತ್ತು ನಿರ್ವಹಣೆ ಬಗ್ಗೆ ತರಬೇತಿ, ಸಮುದ್ರದಲ್ಲಿ ಬೋಟ್‌ನಲ್ಲಿ ಚಾಲನೆ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾ ಯಿತು. ತರಬೇತಿಯಲ್ಲಿ ಒಟ್ಟು 19 ಅಧಿಕಾರಿ ಹಾಗೂ ತಾಂತ್ರಿಕ ಸಿಬ್ಬಂದಿಗಳು ಭಾಗವಹಿಸಿದ್ದರು.
ಶನಿವಾರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕರಾವಳಿ ಕಾವಲು ಪೊಲೀಸ್‌ನ ಪೊಲೀಸ್ ಅಧೀಕ್ಷಕ ಪ್ರಮೋದ್ ರಾವ್ ಎಂ.ಟಿ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತರಬೇತುದಾರ ಗೋವಾ ಶಿಪ್ ಯಾರ್ಡ್ ನ ಸಿರಿಲ್ ಎ. ಫೆರ್ನಾಂಡಿಸ್ ಮತ್ತು ಕರಾವಳಿ ಕಾವಲು ಪೊಲೀಸ್‌ನ ಉಡುಪಿ ಪೊಲೀಸ್ ಉಪಾಧೀಕ್ಷಕ ಪ್ರವೀಣ್ ಹೆಚ್.ನಾಯಕ್, ಕೇಂದ್ರ ಕಚೇರಿಯ ಸಶಸ್ತ್ರ ಪೊಲೀಸ್ ನಿರೀಕ್ಷಕ ನಾಗರಾಜ್ ಕೇಣಿಕರ್ ಭಾಗವಹಿಸಿದ್ದರು. ನಿಸ್ತಂತು ವಿಭಾಗದ ಪೊಲೀಸ್ ಉಪ ನಿರೀಕ್ಷಕ ಮನಮೋಹನ್ ರಾವ್ ಕಾರ್ಯಕ್ರಮ ನಿರ್ವಹಿಸಿದರು.