ಮೆಲ್ಕಾರ್ : ಆಂಬುಲೆನ್ಸ್-ದ್ವಿಚಕ್ರ ವಾಹನ ಢಿಕ್ಕಿ; ಸಹಸವಾರ ಮೃತ್ಯು, ಸವಾರನಿಗೆ ಗಾಯ

ಬಂಟ್ವಾಳ, ನ. 18: ಆಂಬುಲೆನ್ಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸಹಸವಾರ ಮೃತಪಟ್ಟು, ಸವಾರ ಗಾಯಗೊಂಡ ಘಟನೆ ಮೆಲ್ಕಾರ್ ಜಂಕ್ಷನ್ ಬಳಿ ಶನಿವಾರ ತಡರಾತ್ರಿ ಸಂಭವಿಸಿದೆ.
ಬಂಟ್ವಾಳ ತಾಲೂಕಿನ ಅಮ್ಮುಂಜೆ ನಿವಾಸಿ ಫಾರೂಕ್ ಆಲಡಿ (23) ಮೃತ ಸಹ ಸವಾರ ಎಂದು ಗುರುತಿಸಲಾಗಿದ್ದು, ಮುಹಮ್ಮದ್ ಶರೀಫ್ ಗಾಯಗೊಂಡವರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ
ಇವರಿಬ್ಬರು ಶನಿವಾರ ರಾತ್ರಿ 1.30ರ ಸುಮಾರಿಗೆ ಕೆಲಸ ಮುಗಿಸಿ ಹೊಸ ದ್ವಿಚಕ್ರ ವಾಹನದಲ್ಲಿ ಬಿ.ಸಿ.ರೋಡ್‌ನಿಂದ ಅಮ್ಮುಂಜೆ ಕಡೆಗೆ ತೆರಳುತ್ತಿದ್ದರು. ಇದೇ ಸಂದರ್ಭ ಮೆಲ್ಕಾರ್ ಜಂಕ್ಷನ್‌ಗೆ ಬಂದಿದ್ದು, ತದನಂತರ ಸಜೀಪ ಕ್ರಾಸ್ ಬಳಿ ದ್ವಿಚಕ್ರ ವಾಹನವನ್ನು ತಿರುಗಿಸುವಾಗ ಕಲ್ಲಡ್ಕದ ಕಡೆಯಿಂದ ಬಂದ ಆಂಬುಲೆನ್ಸ್ ದ್ವಿಚಕ್ರ ವಾಹನದ ಹಿಂಬದಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರಿಗೂ ಗಂಭೀರ ಗಾಯವಾಗಿದ್ದು, ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಸಹಸವಾರ ಫಾರೂಕ್ ಅವರು ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಮುಂಜಾನೆ ತುಂಬೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತ ಫಾರೂಕ್ ಪೆಂಡಾಲ್ ಹಾಗೂ ಶಾಮಿಯಾನದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಅಪಘಾತದಿಂದ ಆಂಬುಲೆನ್ಸ್‌ನ ಮುಂಭಾಗ ಜಖಂಗೊಂಡರೆ, ದ್ವಿಚಕ್ರ ವಾಹನ ನಜ್ಜುಗುಜ್ಜಾಗಿದೆ. ಈ ಸಂಬಂಧ ಬಂಟ್ವಾಳ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.