ಕುಂದಾಪುರ: ಡಿವೈಎಫ್‌ಐಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಕುಂದಾಪುರ, ನ.18: ರಕ್ತದಾನದ ಮಹತ್ವ ಅರಿತು ಜನರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಪ್ರಾಣ ಉಳಿಸುವ ಕೆಲಸ ಮಾಡಬೇಕು. ರಕ್ತದಾನಕ್ಕಿಂತ ದೊಡ್ಡ ಕಾರ್ಯ ಬೇರಾವುದು ಇಲ್ಲ ಎಂದು ರೆಡ್ ಕ್ರಾಸ್ ಸಂಸ್ಥೆಯ ಜಯಕರ ಶೆಟ್ಟಿ ಹೇಳಿದ್ದಾರೆ.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಕ್ತನಿಧಿ ಕುಂದಾಪುರ ಹಾಗೂ ಲಯನ್ಸ್ ಸಹಕಾರದೊಂದಿಗೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈ ಎಫ್‌ಐ) ಕುಂದಾಪುರ ತಾಲೂಕು ಸಮಿತಿ ರವಿವಾರ ಕುಂದಾಪುರ ರಕ್ತನಿಧಿ ಯಲ್ಲಿ ಆಯೋಜಿಸಲಾದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈ ಸಂದರ್ಭದಲ್ಲಿ 53 ಬಾರಿ ರಕ್ತದಾನ ಮಾಡಿದ ಡಿವೈಎಫ್‌ಐ ಮಾಜಿ ಮುಖಂಡ ಸುಧಾಕರ ಕಾಂಚನ್ ಅವರನ್ನು ಸನ್ಮಾನಿಸಲಾಯಿತು. ರೆಡ್‌ಕ್ರಾಸ್ ಸಂಸ್ಥೆಯ ಶಿವರಾಮ್ ಶೆಟ್ಟಿ, ಗಣೇಶ್ ಆಚಾರ್ಯ, ಡಾ.ಮಲ್ಲಿ, ಡಾ.ಸೋನಿ ಹಾಗೂ ಲಯನ್ಸ್‌ನ ಡಾ.ಶಿವಕುಮಾರ್, ನವೀನ್ ಕುಮಾರ್, ಡಿವೈಎಫ್‌ಐ ರಕ್ತನಿಧಿ ಸಂಚಾಲಕ ಗಣೇಶ್‌ದಾಸ್, ಡಿವೈಎಫ್‌ಐನ ರವಿ ವಿ.ಎಂ, ರಾಜಾ ಬಿಟಿಆರ್, ಗಣೇಶ್ ಕಲ್ಲಾಗರ, ಮಂಜುನಾಥ ಶೋಗನ್ ಅಕ್ಷಯ್ ವಡೇರ ಹೋಬಳಿ, ಗಣೇಶ್ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು.
ಡಿವೈಎಫ್‌ಐ ಕಾರ್ಯದರ್ಶಿ ರಾಜೇಶ್ ವಡೇರಹೋಬಳಿ ಸ್ವಾಗತಿಸಿದರು. ಡಿವೈಎಫ್‌ಐ ಮುಖಂಡ ಸುಬ್ರಹ್ಮಣ್ಯ ಆಚಾರ್ ಪಡುಕೋಣೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.