ಮಣಿಪಾಲದಲ್ಲಿ ಮಕ್ಕಳಿಂದ ಸ್ವಚ್ಛತಾ ಅಭಿಯಾನ

ಮಣಿಪಾಲ, ನ.18: ಮಣಿಪಾಲ ಎಂಐಟಿ ಈಜುಕೊಳದಲ್ಲಿ ಈಜು ತರಬೇತಿ ಪಡೆಯುವ ಮಕ್ಕಳು ಕಲಾವಿದ ಶ್ರೀನಾಥ ಮಣಿಪಾಲ ನೇತೃತ್ವದಲ್ಲಿ ರವಿವಾರ ಮಣಿಪಾಲದ ಸಿಂಡಿಕೇಟ್ ಸರ್ಕಲ್ನಿಂದ ಉಪೇಂದ್ರ ಪೈ ಸರ್ಕಲ್ (ನಾಣ್ಯ ವೃತ್ತ)ವರೆಗೆ ಸ್ವಚ್ಛತಾ ಅಭಿಯಾನವನ್ನು ನಡೆಸಿದರು.
ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಈ ಅಭಿಯಾನಕ್ಕೆ ಚಾಲನೆ ನೀಡಿದರು. ಶ್ರೀನಾಥ್ ಮಣಿಪಾಲ ಮಾತನಾಡಿ, ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ಬಾಲ್ಯದಿಂದಲೇ ಅರಿವು ಮೂಡಿಸುವ ಉದ್ದೇಶದಿಂದ ಅವರನ್ನು ಸಂಘಟಿಸಿ ಅವರಿಂದ ಸಾಂಕೇತಿಕವಾಗಿ ಸ್ವಚ್ಛತಾ ಅಭಿಯಾನವನ್ನು ನಡೆಸಲಾಗಿದೆ. ಮಕ್ಕಳಿಂದ ಸಾರ್ವಜನಿಕರಿಗೆ ಮೂಡಿಸುವ ಜಾಗ್ರತಿ ಅತ್ಯಂತ ಪರಿಣಾಮಕಾರಿ ಯಾಗಲಿದ್ದು ಆ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬಳಿಕ ಮಣಿಪಾಲದ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತೆಯ ಬಗ್ಗೆ ರಚನೆ ಮಾಡಿದ ಕಲಾಕೃತಿಗಳ ಮಹತ್ವವನ್ನು ಮಕ್ಕಳಿಗೆ ವಿವರಿಸಿದರು. ಮಣಿಪಾಲದ ವಿವಿಧ ಭಾಗದ ಮಕ್ಕಳಾದ ಸಿದ್ಧಾಂತ್, ಅವಿನಾಶ್, ಸಂತೋಷ್, ತೇಜಸ್, ದ್ವಿಜೇಶ್, ಅಮರ್, ಅನುಜ್, ಮಯೂರ್, ಸಿದ್ಧಾರ್ಥ್, ಸ್ಕಂದ, ಸೂರಜ್, ಆದಿತ್ಯ, ಧನುಷ್, ಅಮಿತ್, ಚಂದನ್ ಉಪಸ್ಥಿತರಿದ್ದರು.