ರಾಜಸ್ಥಾನ: ಸಚಿನ್ ಪೈಲಟ್ ವಿರುದ್ಧ ಕೊನೆಯ ಕ್ಷಣದಲ್ಲಿ ರಣತಂತ್ರ ಬದಲಿಸಿದ ಬಿಜೆಪಿ
ಪಕ್ಷದ ಏಕೈಕ ಮುಸ್ಲಿಂ ಅಭ್ಯರ್ಥಿ ಖಾನ್ಗೆ ಟೊಂಕ್ ಅಸೆಂಬ್ಲಿ ಕ್ಷೇತ್ರದಿಂದ ಟಿಕೆಟ್
ಜೈಪುರ, ನ.19: ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಆಕಾಂಕ್ಷಿ ಸಚಿನ್ ಪೈಲಟ್ ವಿರುದ್ಧ ಮುಸ್ಲಿಂ ಪ್ರಾಬಲ್ಯದ ಟೊಂಕ್ ಅಸೆಂಬ್ಲಿ ಕ್ಷೇತ್ರದಿಂದ ಕೊನೆಯ ಕ್ಷಣದಲ್ಲಿ ರಣನೀತಿ ಬದಲಿಸಿದ ಬಿಜೆಪಿ ಸಾರಿಗೆ ಸಚಿವ ಯೂನುಸ್ ಖಾನ್ರನ್ನು ಕಣಕ್ಕಿಳಿಸಿದೆ.
ನ.11 ರಂದು ಬಿಜೆಪಿ ಬಿಡುಗಡೆಗೊಳಿಸಿದ್ದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಟೊಂಕ್ ಕ್ಷೇತ್ರದ ಹಾಲಿ ಶಾಸಕ ಅಜಿತ್ ಸಿಂಗ್ ಮೆಹ್ತಾ ಹೆಸರಿತ್ತು. ಇದೀಗ ಮೆಹ್ತಾ ಬದಲಿಗೆ ನಾಗ್ವೌರ್ ಜಿಲ್ಲೆಯ ದೀಡ್ವಾನಾ ಕ್ಷೇತ್ರದ ಹಾಲಿ ಶಾಸಕ ಖಾನ್ಗೆ ಟೊಂಕ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಲಾಗಿದೆ. ಖಾನ್ ಹೆಸರನ್ನು ಕೊನೆಯ ಕ್ಷಣದ ತನಕ ಕಾಯ್ದಿರಿಸಲಾಗಿತ್ತು.
ಸೋಮವಾರ ಬೆಳಗ್ಗೆ ಬಿಜೆಪಿ ಆರು ಅಭ್ಯರ್ಥಿಗಳ 5ನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಪಟ್ಟಿಯಿಂದ ಇಬ್ಬರು ಅಭ್ಯರ್ಥಿಗಳಾದ ಮೆಹ್ತಾ ಹಾಗೂ ಶಂಕರ್ಲಾಲ್ ಖರಾಡಿ ಅವರನ್ನು ಕೈಬಿಟ್ಟಿದೆ. ಈ ಹಿಂದಿನ ಪಟ್ಟಿಯಲ್ಲಿ ಈ ಇಬ್ಬರಿಗೆ ಟೊಂಕ್ ಹಾಗೂ ಖೆರ್ವಾರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿತ್ತು.
ಪೈಲಟ್ ಹಾಗೂ ಖಾನ್ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ.
ರಾಜಸ್ಥಾನ ಚುನಾವಣೆ ಡಿ.7 ರಂದು ಒಂದೇ ಹಂತದಲ್ಲಿ ನಡೆಯಲಿದೆ. ಡಿ.11 ರಂದು ಮತ ಎಣಿಕೆ ನಡೆಯುವುದು.