ಅತ್ಯಂತ ಕಳಪೆ ಮಟ್ಟದಲ್ಲೇ ಮುಂದುವರಿದ ದಿಲ್ಲಿಯ ವಾಯು ಗುಣಮಟ್ಟ
ಹೊಸದಿಲ್ಲಿ, ನ.19: ಅಧಿಕ ತೇವಾಂಶ ಹಾಗೂ ಕಡಿಮೆ ವೇಗದಲ್ಲಿ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಮಟ್ಟದಲ್ಲೇ ಮುಂದುವರಿದಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ತಿಳಿಸಿದೆ.
ದಿಲ್ಲಿಯ 14 ಪ್ರದೇಶಗಳಲ್ಲಿ ವಾಯು ಗುಣಮಟ್ಟ ಅತ್ಯಂತ ಕಳಪೆಯಾಗಿದ್ದರೆ, 14 ನಗರಗಳಲ್ಲಿ ಕಳಪೆ ಗುಣಮಟ್ಟ ದಾಖಲಾಗಿದೆ. 0 ಯಿಂದ 50ರ ವರೆಗಿನ ವಾಯು ಗುಣಮಟ್ಟ ಸೂಚ್ಯಾಂಕವನ್ನು ಉತ್ತಮ ಎಂದು ಪರಿಗಣಿಸಲಾಗಿದ್ದರೆ, 51ರಿಂದ 100 ಸಮಾಧಾನಕರ, 101ರಿಂದ 200 ಸಾಧಾರಣ, 201ರಿಂದ 300 ಕಳಪೆ, 301ರಿಂದ 400 ಅತ್ಯಂತ ಕಳಪೆ, 401ರಿಂದ 500 ಗಂಭೀರ ಪ್ರಮಾಣ ಎಂದು ಪರಿಗಣಿಸಲಾಗುತ್ತದೆ. ಇದೀಗ ದಿಲ್ಲಿಯ ವಾಯುಗುಣಮಟ್ಟದ ಪ್ರಮಾಣ 307 ದಾಖಲಾಗಿದೆ ಎಂದು ಸಿಪಿಸಿಬಿ ತಿಳಿಸಿದೆ. ಈ ಮಧ್ಯೆ, ದಿಲ್ಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆತ್ಯಾಜ್ಯ ಸುಡುವ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
Next Story