ದಲಿತ ಸಿಬ್ಬಂದಿಗೆ ಕಿರುಕುಳ: 4 ಐಐಟಿ ಪ್ರೊಫೆಸರ್ಗಳ ವಿರುದ್ಧ ಎಫ್ಐಆರ್
ಕಾನ್ಪುರ, ನ.19: ಬೋಧಕ ವರ್ಗದ ದಲಿತ ಸಿಬ್ಬಂದಿಗೆ ಕಿರುಕುಳ ನೀಡಿದ ಆರೋಪದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಕಾನ್ಪುರದ ನಾಲ್ವರು ಪ್ರೊಫೆಸರ್ಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಬ್ರಹ್ಮಣ್ಯಂ ಸರ್ದೇಲ ಎಂಬವರು ನೀಡಿದ ದೂರಿನಂತೆ ಐಐಟಿ ಕಾನ್ಪುರದ ಅಂತರಿಕ್ಷ ಯಾನ ವಿಭಾಗದ ಹಿರಿಯ ಪ್ರೊಫೆಸರ್ಗಳಾದ ಇಶಾನ್ ಶರ್ಮ, ಸಂಜಯ್ ಮಿತ್ತಲ್, ರಾಜೀವ್ ಶೇಖರ್ ಮತ್ತು ಸಿಎಸ್ ಉಪಾಧ್ಯಾಯ ಹಾಗೂ ಗುರುತಿಸಲಾಗದ ವ್ಯಕ್ತಿಯ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ. ತಾನು ಮೀಸಲಾತಿಯ ಲಾಭ ಪಡೆದು ಸ್ಥಾನ ಗಿಟ್ಟಿಸಿದ್ದು ಯಾವ ಪ್ರಶ್ನೆಗೂ ಉತ್ತರಿಸಲು ತನಗೆ ಯೋಗ್ಯತೆಯಿಲ್ಲ ಎಂದು ಆರೋಪಿಗಳು ಸುದ್ದಿಹಬ್ಬಿಸುತ್ತಿದ್ದಾರೆ ಎಂದು ಸರ್ದೇಲ ದೂರು ನೀಡಿದ್ದರು. ಅಲ್ಲದೆ ಐಐಟಿ ನಿರ್ದೇಶಕರು ಹಾಗೂ ಅಂತರಿಕ್ಷಯಾನ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊಎ.ಕೆ.ಘೋಷ್ರಿಗೆ ಕೂಡಾ ದೂರು ನೀಡಿದ್ದಾರೆ ಎಂದು ವರದಿ ತಿಳಿಸಿದೆ.