ಉಡುಪಿ ಜಿಪಂ ನೂತನ ಸಿಇಒ ಆಗಿ ಸಿಂಧು ಬಿ.ರೂಪೇಶ್

ಉಡುಪಿ, ನ.19: ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸಿಂಧು ಬಿ. ರೂಪೇಶ್ ಐಎಎಸ್ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಬೆಂಗಳೂರಿನಲ್ಲಿ ಹಣಕಾಸು ಇಲಾಖೆ ಬಜೆಟ್ ಮತ್ತು ಸಂಪನ್ಮೂಲ ವಿಭಾಗದ ಉಪ ಕಾರ್ಯದರ್ಶಿಯಾಗಿದ್ದ ಸಿಂಧು ಬಿ.ರೂಪೇಶ್ ವರ್ಗಾವಣೆಗೊಂಡಿದ್ದರೂ ಯಾವುದೇ ಹುದ್ದೆಯನ್ನು ಅವರಿಗೆ ನೀಡಿರಲಿಲ್ಲ. ಇದೀಗ ಉಡುಪಿಯಲ್ಲಿ ಖಾಲಿಯಾಗಿರುವ ಈ ಹುದ್ದೆಗೆ ಸಿಂಧು ಅವರನ್ನು ನೇಮಕ ಮಾಡಲಾಗಿದೆ.
2011ನೇ ಸಾಲಿನ ಐಎಎಸ್ ಅಧಿಕಾರಿಯಾಗಿರುವ ಸಿಂಧು ಬಿ. ಅವರು ಮೈಸೂರಿನ ಎನ್‌ಐಇಯಿಂದ ಬಿ.ಇ. (ಇ ಎಂಡ್ ಸಿ) ಪದವೀಧರೆ. 2011ನೇ ಸಾಲಿನ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಅವರು ರಾಜ್ಯಕ್ಕೆ ಪ್ರಥಮಿಗರಾಗಿದ್ದರು.
ಈ ಹಿಂದೆ ಜಿಪಂ ಸಿಇಒ ಆಗಿದ್ದ ಶಿವಾನಂದ ಕಾಪಶಿ ಅವರನ್ನು ಸರಕಾರ ನ.13ರಂದು ಬೆಂಗಳೂರಿನ ರಾಜಿವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾ ಲಯದ ರಿಜಿಸ್ಟ್ರರ್ ಹುದ್ದೆಗೆ ವರ್ಗಾಯಿಸಿ, ಅವರಿಂದ ತೆರವಾದ ಹುದ್ದೆಗೆ ಬೆಂಗಳೂರಿನ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮುಖ್ಯ ಆಡಳಿತಾಧಿಕಾರಿ ಪಿ. ವಸಂತ ಕುಮಾರ್ ಅವರನ್ನು ವರ್ಗಾವಣೆಗೊಳಿಸಿತ್ತು. ಆದರೆ ಸರಕಾರ ನ.19ರಂದು ಹೊರಡಿಸಿದ ನೂತನ ಆದೇಶದಲ್ಲಿ ಸಿಂಧು ಬಿ.ರೂಪೇಶ್ ಅವರನ್ನು ಉಡುಪಿ ಜಿಪಂ ಸಿಇಒ ಆಗಿ ನೇಮಕ ಮಾಡಿದ್ದು, ಪಿ.ವಸಂತ ಕುಮಾರ್ ವರ್ಗಾವಣೆಯನ್ನು ರದ್ದುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.