ಬಂಟ್ವಾಳ ಪುರಸಭೆಯಲ್ಲಿ ಅಕ್ರಮ ಕಟ್ಟಡಗಳು ತಲೆಎತ್ತಲು ರಮಾನಾಥ ರೈ ಕಾರಣ: ಹರಿಕೃಷ್ಣ

ಬಂಟ್ವಾಳ, ನ. 19: ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳು ತಲೆ ಎತ್ತಲು ಮಾಜಿ ಸಚಿವ ರಮಾನಾಥ ರೈ ಅವರೇ ಕಾರಣರಾಗಿದ್ದು, ಇಲ್ಲಿ ಅನಧೀಕೃತ ಕಟ್ಟಡಗಳನ್ನು ನಿರ್ಮಾಣ ಮಾಡಬೇಕಾದರೆ ರೈ ಅವರ ಅನುಮತಿ ಇದ್ದರೆ ಸಾಕು. ಇದಕ್ಕೆಲ್ಲಾ ಅವರು ಕುಮ್ಮಕ್ಕು ನೀಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್ ಆರೋಪಿಸಿದ್ದಾರೆ.
ಸೋಮವಾರ ಸಂಜೆ ಬಿ.ಸಿ.ರೋಡಿನ ಪಕ್ಷ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಾ ಬ್ಯಾಂಕ್ ವಿಲೀನ ಕುರಿತು ಹುಸಿ ಪ್ರತಿಭಟನೆ ನಡೆಸಿದ ರೈ, ತನ್ನ ಕಟ್ಟಡದಲ್ಲೇ ನಿಯಮ ಉಲ್ಲಂಘಿಸಿ ಬ್ಯಾಂಕಿಗೆ ಬಾಡಿಗೆ ಕೊಟ್ಟಿದ್ದಾರೆ ಎಂದರು.
ಅನಧಿಕೃತ ಕಟ್ಟಡಗಳು ಬಿ.ಸಿ.ರೋಡಿನಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಅದರ ಬಗ್ಗೆ ಮುಖ್ಯಾಧಿಕಾರಿ ನೋಟಿಸ್ ಕೊಟ್ಟರೂ ನಿರ್ಮಾಣ ನಡೆಯುತ್ತಿದೆ ಎಂದ ಅವರು, ಜಿಲ್ಲಾಧಿಕಾರಿ ಕೂಡಲೇ ಬಂಟ್ವಾಳದ ಅಕ್ರಮ ಕಟ್ಟಡ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಮುಲ್ಲಾ ಸ್ಥಾನ ಆಯ್ಕೆಯಿಂದ ರೈಗೆ ಸೋಲು:
ರೈ ವಿರುದ್ಧ ತಾನು ಮಾತನಾಡುತ್ತೇನೆ, ಅವರು ತನ್ನನ್ನು ಪುರೋಹಿತ ಎಂದದ್ದನ್ನು ಸ್ವೀಕರಿಸುತ್ತೇನೆ. ಆದರೆ, ರೈ ಪುರೋಹಿತ ಸ್ಥಾನ ಬಿಟ್ಟು ಮುಲ್ಲಾ ಸ್ಥಾನ ಆಯ್ಕೆ ಮಾಡಿ ಚುನಾವಣೆಯಲ್ಲಿ ಸೋಲುಂಡರು ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷ ಪ್ರಮುಖರಾದ ದೇವದಾಸ ಶೆಟ್ಟಿ, ಜಿ.ಆನಂದ, ಎ.ಗೋವಿಂದ ಪ್ರಭು, ದಿನೇಶ್ ಅಮ್ಟೂರು, ಪುರುಷೋತ್ತಮ ಶೆಟ್ಟಿ, ರಂಜಿತ್ ಮೈರ ಉಪಸ್ಥಿತರಿದ್ದರು.