ಬ್ಯಾರಿ ಅಕಾಡಮಿಯಿಂದ ಮೀಲಾದ್ ಜಲ್ಸ್-ಕೃತಿ ಬಿಡುಗಡೆ

ಮಂಗಳೂರು, ನ.19: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ‘ಮೇಲ್ತೆನೆ’ ಸಂಘಟನೆಯ ಸಹಕಾರದೊಂದಿಗೆ ಕೊಣಾಜೆ ಸಮೀಪದ ಗ್ರಾಮಚಾವಡಿಯ ಅಲ್ ಅಕ್ಸಾ ಜುಮಾ ಮಸೀದಿಯ ವಠಾರದಲ್ಲಿ ಮೀಲಾದ್ ಜಲ್ಸ್- ಅಂತರ್ ಮದ್ರಸ ಮೀಲಾದ್ ಪ್ರತಿಭಾ ಸ್ಪರ್ಧೆ ಹಾಗೂ ‘ಮೇಲ್ತೆನೆರೊ ಮುತ್ತುಙ’ ಪುಸ್ತಕ ಬಿಡುಗಡೆ ಮತ್ತು ಮೀಲಾದ್ ಬ್ಯಾರಿ ಕವಿಗೋಷ್ಠಿ ಕಾರ್ಯಕ್ರಮ ರವಿವಾರ ಜರುಗಿತು.
ಮಸೀದಿಯ ಖತೀಬ್ ಮೌಲಾನ ಶಾಜಹಾನ್ ಮಕ್ದೂಮಿ ಕಾರ್ಯಕ್ರಮ ಉದ್ಘಾಟಿಸಿದರು. ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ರಿಜಿಸ್ಟ್ರಾರ್ ಪ್ರೊ.ಎ.ಎಂ. ಖಾನ್ ‘ಮೇಲ್ತೆನೆರೊ ಮುತ್ತುಙ’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯ ಉಮರ್ ಪಜೀರ್ ಪುಸ್ತಕದ ಪರಿಚಯ ಮಾಡಿದರು.
ಮುಖ್ಯ ಅತಿಥಿಗಳಾಗಿ ಅಲ್ ಅಕ್ಸಾ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಮೋನು, ಅಲ್ ಅಕ್ಸಾ ಇಸ್ಲಾಮಿಕ್ ಟ್ರಸ್ಟ್‌ನ ಗೌರವಾಧ್ಯಕ್ಷ ಹನೀಫ್ ಗ್ರಾಮಚಾವಡಿ, ಮೇಲ್ತೆನೆಯ ಸದಸ್ಯ ಮುಹಮ್ಮದ್ ಬಾಷಾ ನಾಟೆಕಲ್ ಭಾಗವಹಿಸಿದ್ದರು. ಅಕಾಡಮಿಯ ಸದಸ್ಯರಾದ ಹಸನಬ್ಬ ಮೂಡುಬಿದಿರೆ, ತನ್ಸೀಫ್ ಕಿಲ್ಲೂರು ಉಪಸ್ಥಿತರಿದ್ದರು.
ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆಯ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಹುಸೈನ್ ಕಾಟಿಪಳ್ಳ, ಬಶೀರ್ ಅಹ್ಮದ್ ಕಿನ್ಯ, ಹಂಝ ಮಲಾರ್, ಇಸ್ಮಾಯೀಲ್ ಟಿ, ಮನ್ಸೂರ್ ಅಹ್ಮದ್ ಸಾಮಣಿಗೆ, ಬಶೀರ್ ಕಲ್ಕಟ್ಟ, ನಿಝಾಮ್ ಬಜಾಲ್ ಕವನ ವಾಚಿಸಿದರು. ಲೇಖಕ ಇಸ್ಮತ್ ಪಜೀರ್ ಕಾರ್ಯಕ್ರಮ ನಿರೂಪಿಸಿದರು.
ಮದ್ರಸ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಗಾಯನ ಸ್ಪರ್ಧೆಯಲ್ಲಿ ಪ್ರಥಮ-ಹರ್ಷದ್ (ಕುತುಬಿಯ್ಯ ಮದ್ರಸ ಕಿನ್ಯ), ದ್ವಿತೀಯ-ಅಯೀಲ್ ಎ.ಎಂ. (ಅಲ್ ಅಕ್ಸಾ ಮದ್ರಸ ಗ್ರಾಮಚಾವಡಿ), ತೃತೀಯ-ಮುಹಮ್ಮದ್ ಫರಾಝ್ (ಇನೋಳಿ ಬಿ ಸೈಟ್ ಮದ್ರಸ), ಓದುವ ಸ್ಪರ್ಧೆಯಲ್ಲಿ ಪ್ರಥಮ ಶಾಹಿಲ್- (ಕುತುಬಿಯ್ಯ ಮದ್ರಸ ಕಿನ್ಯ), ದ್ವಿತೀಯ-ತನ್ಸೀಫ್ (ನೂರುಲ್ ಇಸ್ಲಾಂ ಮದ್ರಸ ಮಲಾರ್), ತೃತೀಯ- ಮುಹಮ್ಮದ್ ಮೆಹ್‌ರೂಫ್ (ಇನೋಳಿ ಎ ಸೈಟ್ ಮದ್ರಸ), ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಶಾಹಿಲ್- (ಕುತುಬಿಯ್ಯ ಮದ್ರಸ ಕಿನ್ಯ), ದ್ವಿತೀಯ- ಸಾಲಿಂ (ಅಲ್ ಅಕ್ಸಾ ಮದ್ರಸ ಗ್ರಾಮಚಾವಡಿ), ತೃತೀಯ-ಮುದಸ್ಸಿರ್ (ಹಿದಾಯತುಲ್ ಇಸ್ಲಾಂ ಮದ್ರಸ ಪಜೀರ್) ಬಹುಮಾನ ಸ್ವೀಕರಿಸಿದರು.