ಕಿವೀಸ್ ವಿರುದ್ಧ ಪಾಕ್‌ಗೆ 4 ರನ್ ಸೋಲು
ಅಜಾಝ್ ಪಟೇಲ್‌ಗೆ ಐದು ವಿಕೆಟ್ ಗೊಂಚಲು
ಮೊದಲ ಟೆಸ್ಟ್
ಅಬುಧಾಬಿ, ನ.19: ಪಾದಾರ್ಪಣೆ ಪಂದ್ಯದಲ್ಲೇ ಐದು ವಿಕೆಟ್ ಗೊಂಚಲು ಪಡೆದ ಅಜಾಝ್ ಪಟೇಲ್ ಸಾಹಸದ ನೆರವಿನಿಂದ ನ್ಯೂಝಿಲೆಂಡ್ ತಂಡ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 4 ರನ್‌ನಿಂದ ಗೆದ್ದುಕೊಂಡಿದೆ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 5ನೇ ಕಡಿಮೆ ರನ್ ಅಂತರದ ಜಯವಾಗಿದೆ.
ಮೊದಲ ಟೆಸ್ಟ್ ಪಂದ್ಯ ಗೆಲ್ಲಲು 176 ರನ್ ಗುರಿ ಪಡೆದಿದ್ದ ಪಾಕಿಸ್ತಾನ ತಂಡ ನಾಲ್ಕನೇ ದಿನವಾದ ಸೋಮವಾರ ವಿಕೆಟ್ ನಷ್ಟವಿಲ್ಲದೆ 37 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು. ಇಂದು ಪಂದ್ಯವನ್ನು ಗೆಲ್ಲಲು 139 ರನ್ ಗಳಿಸುವ ಅಗತ್ಯವಿತ್ತು. ಆದರೆ, ನಾಟಕೀಯ ತಿರುವಿನಲ್ಲಿ ಕೆಳ ಕ್ರಮಾಂಕದ ಕುಸಿತಕ್ಕೆ ಒಳಗಾದ ಪಾಕಿಸ್ತಾನ 58.4 ಓವರ್‌ಗಳಲ್ಲಿ 171 ರನ್‌ಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.
ಪಾಕಿಸ್ತಾನ 48 ರನ್‌ಗೆ 3 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ ಅಸದ್ ಶಫೀಕ್(45) ಅವರೊಂದಿಗೆ 4ನೇ ವಿಕೆಟ್‌ಗೆ 82 ರನ್ ಜೊತೆಯಾಟ ನಡೆಸಿದ ಅಝರ್ ಅಲಿ(65,136 ಎಸೆತ, 5 ಬೌಂಡರಿ) ಪಾಕ್‌ಗೆ ಗೆಲುವಿನ ವಿಶ್ವಾಸ ಮೂಡಿಸಿದರು. ವಾಗ್ನರ್ ಈ ಜೋಡಿಯನ್ನು ಬೇರ್ಪಡಿಸಿದರು. ಶಫೀಕ್ ಔಟಾದ ಬಳಿಕ ಕುಸಿತದ ಹಾದಿ ಹಿಡಿದ ಪಾಕ್‌ನ ಕೆಳ ಕ್ರಮಾಂಕದ ಮೂವರು ಆಟಗಾರರಾದ ಆಸೀಫ್, ಯಾಸಿರ್ ಶಾ ಹಾಗೂ ಹಸನ್ ಅಲಿ ಖಾತೆ ತೆರೆಯಲು ವಿಫಲರಾದರು. ಅಗ್ರ ಸ್ಕೋರರ್ ಅಲಿ ಕೊನೆಯ ಬ್ಯಾಟ್ಸ್‌ಮನ್ ಆಗಿ ಪೆವಿಲಿಯನ್ ಸೇರಿದರು. ಎಡಗೈ ಸ್ಪಿನ್ನರ್ ಪಟೇಲ್(5-59)ಕೊನೆಯ ವಿಕೆಟ್ ಕಬಳಿಸಿ ಪಾಕ್ ಇನಿಂಗ್ಸ್‌ಗೆ ತೆರೆ ಎಳೆದರು.
ಕಿವೀಸ್‌ಗೆ ಅನಿರೀಕ್ಷಿತ ಗೆಲುವು ತಂದುಕೊಟ್ಟ ಅಜಾಝ್ ಪಟೇಲ್ ಪಂದ್ಯಶ್ರೇಷ್ಠ ಗೌರವ ಪಡೆದರು.
ಈ ಗೆಲುವಿನೊಂದಿಗೆ ನ್ಯೂಝಿಲೆಂಡ್ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ಪಂದ್ಯ ದುಬೈನಲ್ಲಿ ನ.24 ರಿಂದ 28ರ ತನಕ ಹಾಗೂ ಮೂರನೇ ಪಂದ್ಯ ಡಿ.3 ರಿಂದ 7ರ ತನಕ ಅಬುಧಾಬಿಯಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್
►ನ್ಯೂಝಿಲೆಂಡ್ ಮೊದಲ ಇನಿಂಗ್ಸ್: 153/10
►ಪಾಕಿಸ್ತಾನ ಮೊದಲ ಇನಿಂಗ್ಸ್: 227/10
►ನ್ಯೂಝಿಲೆಂಡ್ ಎರಡನೇ ಇನಿಂಗ್ಸ್: 249/10
►ಪಾಕಿಸ್ತಾನ ಎರಡನೇ ಇನಿಂಗ್ಸ್: 171/10
(ಅಝರ್ ಅಲಿ 65, ಶಫೀಕ್ 45, ಪಟೇಲ್ 5-59)







