ಭಾರತ ಎ-ನ್ಯೂಝಿಲೆಂಡ್ ಎ ಪಂದ್ಯ ಡ್ರಾ
ಟೆಸ್ಟ್ ಸ್ಪೆಷಲಿಸ್ಟ್ ಗಳಿಂದ ಬ್ಯಾಟಿಂಗ್ ಅಭ್ಯಾಸ

ಮೊದಲ ಟೆಸ್ಟ್
ಹ್ಯಾಮಿಲ್ಟನ್, ನ.19:ನ್ಯೂಝಿಲೆಂಡ್ ಎ ವಿರುದ್ಧದ ಮೊದಲ ಅನಧಿಕೃತ ಟೆಸ್ಟ್ ಪಂದ್ಯವನ್ನು ಭಾರತ ಎ ತಂಡ ಡ್ರಾ ಮಾಡಿಕೊಂಡಿದೆ. ತಂಡದ ಟೆಸ್ಟ್ ಸ್ಪೆಷಲಿಸ್ಟ್ ಗಳಾದ ಮುರಳಿ ವಿಜಯ್ ಹಾಗೂ ಯುವ ಆಟಗಾರರಾದ ಪೃಥ್ವಿಶಾ ಹಾಗೂ ಹನುಮ ವಿಹಾರಿ ಕೊನೆಯ ದಿನವಾದ ಸೋಮವಾರ ಅರ್ಧಶತಕ ಸಿಡಿಸಿ ಮುಂಬರುವ ಆಸ್ಟ್ರೇಲಿಯ ಪ್ರವಾಸಕ್ಕೆ ಉತ್ತಮ ಬ್ಯಾಟಿಂಗ್ ಅಭ್ಯಾಸ ನಡೆಸಿದರು.
ಪಂದ್ಯ ಡ್ರಾನಲ್ಲಿ ಕೊನೆಗೊಳ್ಳುವ ಮೊದಲು ಭಾರತ ಎ ತಂಡ 65 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 247 ರನ್ ಗಳಿಸಿದೆ.
ಆರಂಭಿಕ ಆಟಗಾರರಾದ ಶಾ(50,53 ಎಸೆತ) ಹಾಗೂ ವಿಜಯ್(60,113 ಎಸೆತ)ಮೊದಲ ವಿಕೆಟ್‌ಗೆ 74 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಮುಂಬೈನ ಯುವ ಆಟಗಾರ ಶಾ 53 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್‌ಗಳ ಸಹಿತ 50 ರನ್ ಗಳಿಸಿದರು. ಶಾ ಪಂದ್ಯದಲ್ಲಿ ಸತತ 2ನೇ ಅರ್ಧಶತಕ ಪೂರೈಸಿದ ಬೆನ್ನಿಗೆ ಔಟಾದರು.
ಶಾ ಔಟಾದ ಬಳಿಕ ಫಾರ್ಮ್ ನಲ್ಲಿರುವ ಮಯಾಂಕ್ ಅಗರ್ವಾಲ್(42)ವಿಜಯ್‌ರೊಂದಿಗೆ ಸೇರಿಕೊಂಡು 2ನೇ ವಿಕೆಟ್‌ಗೆ 81 ರನ್ ಸೇರಿಸಿದರು. ಕರ್ನಾಟಕದ ಆಟಗಾರ ತನ್ನ ಇನಿಂಗ್ಸ್ ನಲ್ಲಿ ಆರು ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು.
ಟೆಸ್ಟ್ ಉಪ ನಾಯಕ ಅಜಿಂಕ್ಯ ರಹಾನೆ(ಔಟಾಗದೆ 41, 94 ಎಸೆತ) ಹಾಗೂ ವಿಹಾರಿ(ಔಟಾಗದೆ 51,63 ಎಸೆತ)ನಾಲ್ಕನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 86 ರನ್ ಸೇರಿಸಿದರು.
ಸಂಕ್ಷಿಪ್ತ ಸ್ಕೋರ್
►ಭಾರತ ಎ: 467/8 ಡಿಕ್ಲೇರ್ ಹಾಗೂ 247/3(ವಿಜಯ್ 60, ಶಾ 50, ವಿಹಾರಿ ಔಟಾಗದೆ 51, ರಹಾನೆ ಔಟಾಗದೆ 41, ಅಗರ್ವಾಲ್ 42)
►ನ್ಯೂಝಿಲೆಂಡ್ ಎ: 458/9 ಡಿಕ್ಲೇರ್.







