ಸಿಎಂ ಕುಮಾರಸ್ವಾಮಿ ರೈತರ ಕ್ಷಮೆಯಾಚಿಸಲಿ: ಕುರುಬೂರು ಶಾಂತಕುಮಾರ್ ಒತ್ತಾಯ

ಮೈಸೂರು,19: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಅತ್ಯಂತ ಖಂಡನೀಯ. ಅವರು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಮೈಸೂರಿನಲ್ಲಿ ರೈತ ಮುಖಂಡ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ನಗರದ ಜಲದರ್ಶಿನಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕುರುಬೂರು ಶಾಂತಕುಮಾರ್ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಅಂತ ತಾರತಮ್ಯ ಬೇಡ. ಇದರಿಂದಲೇ ಸಮಸ್ಯೆಗಳು ಹೆಚ್ಚಾಗಲಿವೆ. ರಾಜ್ಯದಲ್ಲಿ ಹೆಚ್ಚು ಕಬ್ಬು ಬೆಳೆಯುವುದು ಬೆಳಗಾವಿಯಲ್ಲಿ. ಆದರೆ ಅಧಿಕಾರಿಗಳು ರಾಜಕಾರಣಿಗಳ ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಬ್ಬಿನ ಹಣ ಪಾವತಿಸಿಲ್ಲ. ಕಾರ್ಖಾನೆಗಳು ತಮ್ಮ ಬಳಿಯೇ ಹಣ ಇಟ್ಟುಕೊಂಡು ಸತಾಯಿಸುತ್ತಿದ್ದಾರೆ ಎಂದರು.
ರೈತರನ್ನು ಹತ್ತಿಕ್ಕುವ ಕೆಲಸ ಮಾಡಬೇಡಿ ಎಂದು ಮೈಸೂರಿನಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಅವರು ಅಧಿಕಾರದಿಂದ ರೈತರನ್ನು ಬಂಧಿಸುವ ಕೆಲಸ ಮಾಡಬೇಡಿ. ರೈತರ ಮೇಲೆ ನಿಮ್ಮ ದಬ್ಬಾಳಿಕೆ ಬೇಡ. ರೈತರು ಸಿಡಿದೆದ್ದಿದ್ದಾರೆ. ನಾವೇ ಹೋರಾಟ ಮಾಡುತ್ತೇವೆ. ನಮಗೆ ರಾಜಕೀಯ ಪಕ್ಷಗಳ ಬೆಂಬಲ ಬೇಕು ಎಂದು ಕೇಳಿಲ್ಲ. ಅವರ ಪಾಡಿಗೆ ಅವರು ಹೋರಾಟ ಮಾಡಿಕೊಳ್ಳುತ್ತಾರೆ. ಅವರನ್ನು ನಂಬಿ ನಾವು ನಮ್ಮ ಹೋರಾಟ ಮಾಡುತ್ತಿಲ್ಲ ಎಂದು ಹೇಳಿದರು.





