ನ.23ರಂದು ಸೆಮಿಫೆನಲ್ ಭಾರತಕ್ಕೆ ಆಂಗ್ಲರ ಸವಾಲು
ಗ್ರಾಸ್ ಐಸ್ಲೆಟ್(ಸೈಂಟ್ ಲೂಸಿಯ), ನ.19: ವನಿತೆಯರ ಟ್ವೆಂಟಿ-20 ವಿಶ್ವಕಪ್ ನ ಎರಡನೇ ಸೆಮಿಫೈನಲ್‌ನಲ್ಲಿ ಶುಕ್ರವಾರ ಇಂಗ್ಲೆಂಡ್ ತಂಡವನ್ನು ಭಾರತ ಎದುರಿಸಲಿದೆ.
ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ 2009ರ ಚಾಂಪಿಯನ್ ಇಂಗ್ಲೆಂಡ್‌ನ್ನು ಹಾಲಿ ಚಾಂಪಿಯನ್ ವೆಸ್ಟ್‌ಇಂಡೀಸ್ 4 ವಿಕೆಟ್‌ಗಳ ಅಂತರದಲ್ಲಿ ಸೋಲಿಸಿತ್ತು. ಇದರೊಂದಿಗೆ ಇಂಗ್ಲೆಂಡ್ ‘ಎ’ ಗುಂಪಿನಲ್ಲಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಸೆಮಿಫೈನಲ್‌ನಲ್ಲಿ ಭಾರತವನ್ನು ಎದುರಿಸಲಿದೆ.
ಭಾರತ ‘ಬಿ’ ಗುಂಪಿನಲ್ಲಿ ಆಡಿರುವ ಎಲ್ಲ 4 ಪಂದ್ಯಗಳಲ್ಲಿ ಜಯ ಗಳಿಸಿ ಅಗ್ರ ಸ್ಥಾನದೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಕಳೆದ ವರ್ಷ 50 ಓವರ್‌ಗಳ ವಿಶ್ವಕಪ್‌ನಲ್ಲಿ ಭಾರತವನ್ನು ಇಂಗ್ಲೆಂಡ್ ಮಣಿಸಿ ಪ್ರಶಸ್ತಿ ಬಾಚಿಕೊಂಡಿತ್ತು. ಇದೀಗ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಉತ್ತಮ ಅವಕಾಶ ಒದಗಿ ಬಂದಿದೆ.
ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಭಾರತದ ವನಿತೆಯರ ತಂಡ ಮೂರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ತಂಡವನ್ನು ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಮಣಿಸಿ ಅಜೇಯವಾಗಿ ಸೆಮಿಫೈನಲ್ ತಲುಪಿತ್ತು. ಇಂಗ್ಲೆಂಡ್‌ನ್ನು 115/8ಕ್ಕೆ ನಿಯಂತ್ರಿಸಿದ್ದ ವೆಸ್ಟ್‌ಇಂಡೀಸ್ ಇನ್ನೂ 3 ಎಸೆತಗಳು ಬಾಕಿ ಇರುವಾಗಲೇ ಗೆಲುವಿಗೆ ಅಗತ್ಯದ 116 ರನ್‌ಗಳನ್ನು ಪೂರೈಸಿತ್ತು. ದಿಯಾಂದ್ರ ಡಾಟ್ಟಿನ್ 52 ಎಸೆತಗಳಲ್ಲಿ 46 ರನ್ ಗಳಿಸಿದ್ದರು.
ಕೊನೆಯ ಮ್ಯಾಜಿಕ್‌ನಲ್ಲಿ ಇಂಗ್ಲೆಂಡ್‌ನ್ನು ಮಣಿಸಿದ ವೆಸ್ಟ್ ಇಂಡೀಸ್ ನ.22ರಂದು ಅಂಟಿಗುವಾದಲ್ಲಿ ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು ಎದುರಿಸಲಿದೆ.







