ಸೈನಾ ನೆಹ್ವಾಲ್ ಫೇವರಿಟ್ ಶ್ರೀಕಾಂತ್, ಸಿಂಧು ಅಲಭ್ಯ
ಸೈಯದ್ ಮೋದಿ ಟೂರ್ನಿ
ಲಕ್ನೊ, ನ.19: ಸೈಯದ್ ಮೋದಿ ಇಂಟರ್‌ನ್ಯಾಶನಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಸೈನಾ ನೆಹ್ವಾಲ್ ಭಾರತದ ಸಾರಥ್ಯ ವಹಿಸಲಿದ್ದಾರೆ. ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಹಾಗೂ ಕಿಡಂಬಿ ಶ್ರೀಕಾಂತ್ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಟೂರ್ನಮೆಂಟ್ ಮಂಗಳವಾರದಿಂದ ಆರಂಭವಾಗಲಿದೆ. ಸಮೀರ್ ವರ್ಮಾ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡು ವರ್ಷಾಂತ್ಯದಲ್ಲಿ ನಡೆಯುವ ವರ್ಲ್ಡ್ ಟೂರ್ ಟೂರ್ನಿಯಲ್ಲಿ ಅರ್ಹತೆ ಪಡೆಯುವ ವಿಶ್ವಾಸದಲ್ಲಿದ್ದಾರೆ. ಮಿಶ್ರ ಡಬಲ್ಸ್ ಜೋಡಿ ಪ್ರಣವ್ ಚೋಪ್ರಾ ಹಾಗೂ ಸಿಕ್ಕಿ ರೆಡ್ಡಿ ಕಳೆದ ವರ್ಷದ ಪ್ರದರ್ಶನ ಪುನರಾವರ್ತಿಸುವ ವಿಶ್ವಾಸದಲ್ಲಿದ್ದಾರೆ.
ಮುಂದಿನ ತಿಂಗಳು ಚೀನಾದಲ್ಲಿ ನಡೆಯುವ ವರ್ಲ್ಡ್ ಟೂರ್ ಫೈನಲ್ಸ್‌ನಲ್ಲಿ ಗಮನ ನೀಡಲು ಈ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಸಿಂಧು ಅನುಪಸ್ಥಿತಿಯಲ್ಲಿ ಸೈನಾ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಸೈನಾ ಈ ವರ್ಷ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಹಾಗೂ ಏಶ್ಯನ್ ಗೇಮ್ಸ್‌ನಲ್ಲಿ ಕಂಚು ಜಯಿಸಿ ಸಾಧಾರಣ ಪ್ರದರ್ಶನ ನೀಡಿದ್ದಾರೆ.ಜನವರಿಯಲ್ಲಿ ನಡೆದ ಇಂಡೋನೇಶ್ಯಾ ಮಾಸ್ಟರ್ಸ್ ಹಾಗೂ ಅಕ್ಟೋಬರ್‌ನಲ್ಲಿ ನಡೆದ ಡೆನ್ಮಾರ್ಕ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ್ದಾರೆ.
ಸೈನಾ ಮೊದಲ ಸುತ್ತಿನಲ್ಲಿ ಮಾರಿಷಸ್‌ನ ಕಾಟೆ ಫೂರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಟೂರ್ನಿಯಲ್ಲಿ ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಲಿ ಕ್ಯುರುಯ್ ಅವರನ್ನು ಎದುರಿಸುವ ಸಾಧ್ಯತೆಯಿದೆ. ಎಚ್.ಎಸ್. ಪ್ರಣಯ್ ಥಾಯ್ಲೆಂಡ್‌ನ ಅದುಲ್‌ರಾಚ್ ನಮ್ಕುಲ್‌ರನ್ನು ಎದುರಿಸುವ ಮೂಲಕ ತನ್ನ ಹೋರಾಟ ಆರಂಭಿಸಲಿದ್ದಾರೆ. 3ನೇ ಸುತ್ತಿನಲ್ಲಿ ಗುರುಸಾಯಿದತ್ತ ಎದುರಾಗುವ ಸಾಧ್ಯತೆಯಿದೆ.







