ಹನೂರು: ಇಂದಿರಾ ಗಾಂಧಿ ಜನ್ಮದಿನ ಆಚರಣೆ

ಹನೂರು,ನ.19: ದೇಶದ ಅಭಿವೃದ್ದಿಗೆ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಕೊಡುಗೆ ಗಮನಾರ್ಹ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ದೊರೈರಾಜ್ ತಿಳಿಸಿದರು.
ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ 101ನೇ ಹುಟ್ಟುಹಬ್ಬದ ಅಂಗವಾಗಿ ಸೋಮವಾರ ಗ್ರಾಮದ ಬಡ ಮಹಿಳೆಯರಿಗೆ ಸೀರೆ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಇಂದಿನ ಅಭಿವೃದ್ದಿಗೆ ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿದ್ದಾಗ ಕೈಗೊಂಡ ದಿಟ್ಟ ನಿರ್ಧಾರ ಕಾರಣ. ಅವರು ಬಡವರ, ದೀನ, ದಲಿತರ ಹಿಂದುಳಿದ ವರ್ಗದ ಪರವಾಗಿ ನಿಂತ ಧೀಮಂತ ಮಹಿಳೆ ಎಂದರು.
ನಂತರ ಮಾತನಾಡಿದ ಹನೂರು ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ರಾಯಿಲ್, ಇಂದಿರಾಗಾಂಧಿಯವರ 20 ಅಂಶಗಳ ಕಾರ್ಯಕ್ರಮದಿಂದಾಗಿ ದೇಶದ ಪ್ರತಿಯೊಬ್ಬ ಪ್ರಜೆಗೆ ಅನುಕೂಲವಾಯಿತಲ್ಲದೆ ಬ್ಯಾಂಕುಗಳ ರಾಷ್ಟ್ರೀಕರಣಗಳಿಂದಾಗಿ ಸಾಮಾನ್ಯ ಜನರು ಸಹ ಬ್ಯಾಂಕಿನ ಸೌಲಭ್ಯ ಪಡೆಯುವಂತಾಯಿತು. ಅಲ್ಲದೇ ಇಂದಿನ ಯುವಜನತೆಗೆ ಇಂದಿರಾಗಾಂಧಿಯವರ ಕಾರ್ಯಕ್ರಮ ವ್ಯಕ್ತಿತ್ವ ಮತ್ತು ಜೀವನ ಚರಿತ್ರೆಯನ್ನು ತಿಳಿಸಿಕೊಡುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ಈ ಸಮಾರಂಭದಲ್ಲಿ ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವುಕುಮಾರ್, ಮಾದೇಶ್, ಹನೂರು ಟೌನ್ ಅಧ್ಯಕ್ಷ ಸತೀಶ್, ಅತಿಖ್, ಸೇರಿದಂತೆ ವಿನೋದ್, ಪವನ್, ಮುಸವಿರ್ ಇನ್ನಿತರರು ಹಾಜರಿದ್ದರು.







