ರಾಜ್ಯಮಟ್ಟದ ಪದವಿಪೂರ್ವ ಕಾಲೇಜ್ ಖೋಖೋ ಪಂದ್ಯಾಟ: ದಾವಣಗೆರೆ, ಮೈಸೂರು ತಂಡ ಚಾಂಪಿಯನ್
ದಾವಣಗೆರೆ,ನ.19: ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಖೋಖೋ ಪಂದ್ಯಾವಳಿಯ ಬಾಲಕರ ವಿಭಾಗದಲ್ಲಿ ದಾವಣಗೆರೆ ತಂಡ ಹಾಗೂ ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡ ಚಾಂಪಿಯನ್‍ಶಿಪ್ ಪ್ರಶಸ್ತಿ ಗಳಿಸಿವೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ದಾವಣಗೆರೆ ತಂಡವು ದಕ್ಷಿಣ ಕನ್ನಡ ತಂಡವನ್ನು 15-13 ಮತ್ತು ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡವು ದಕ್ಷಿಣ ಕನ್ನಡ ತಂಡವನ್ನು 5-4 ಅಂತರದಿಂದ ಮಣಿಸಿ ಜಯ ಗಳಿಸಿತು. ದಕ್ಷಿಣ ಕನ್ನಡ ತಂಡವು ಎರಡೂ ವಿಭಾಗಗಳಲ್ಲಿ ರನ್ನರ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ ತಂಡವು 13-12 ಅಂತರದಿಂದ ಚಿಕ್ಕೋಡಿ ತಂಡವನ್ನು ಹಾಗೂ ದಾವಣಗೆರೆ ತಂಡವು 16-13 ಅಂತರದಿಂದ ಮೈಸೂರು ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದವು. ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ತಂಡವು 9-2 ಅಂತರದಿಂದ ತುಮಕೂರು ತಂಡವನ್ನು ಮತ್ತು ಮೈಸೂರು ತಂಡವು 16-5 ಅಂತರದಿಂದ ಉತ್ತರ ಕನ್ನಡ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು.
ಪಂದ್ಯಾವಳಿಯ ಬಾಲಕರ ವಿಭಾಗದಲ್ಲಿ ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ತಂಡದ ಮರಿಯಪ್ಪ, ಬೆಸ್ಟ್ ಚೇಜರ್ ಪ್ರಶಸ್ತಿಯನ್ನು ದಾವಣಗೆರೆ ತಂಡದ ಶಂಕರ್, ಬೆಸ್ಟ್ ಆಲ್‍ರೌಂಡರ್ ಪ್ರಶಸ್ತಿಯನ್ನು ದಾವಣಗೆರೆಯ ಪುನಿತ್ ಕುಮಾರ್ ಪಡೆದುಕೊಂಡರು. ಬಾಲಕಿಯರ ವಿಭಾಗದಲ್ಲಿ ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಮೈಸೂರು ತಂಡದ ಚೈತ್ರಾ, ಬೆಸ್ಟ್ ಚೇಜರ್ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ತಂಡದ ಸುಮಿತ್ರಾ, ಬೆಸ್ಟ್ ಆಲ್‍ರೌಂಡರ್ ಪ್ರಶಸ್ತಿಯನ್ನು ಮೈಸೂರು ತಂಡದ ಎಸ್.ವಿನುತಾ ತಮ್ಮದಾಗಿಸಿಕೊಂಡರು.
ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಹೆಚ್.ಕೆ.ಶೇಖರಪ್ಪ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.







