ಶಬರಿಮಲೆಯನ್ನು ಇನ್ನೊಂದು ಅಯೋಧ್ಯೆಯನ್ನಾಗಿಸಲು ಆರೆಸ್ಸೆಸ್ ಗೆ ಅವಕಾಶ ನೀಡಲ್ಲ: ಪಿಣರಾಯಿ ವಿಜಯನ್

ತಿರುವನಂತಪುರಂ, ನ.20: ಶಬರಿಮಲೆಯನ್ನು ಇನ್ನೊಂದು ಅಯೋಧ್ಯೆಯನ್ನಾಗಿಸಲು ಆರೆಸ್ಸೆಸ್ ಗೆ ಅವಕಾಶ ನೀಡುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಶಬರಿಮಲೆ ವಿವಾದ ಮುಂದಿಟ್ಟುಕೊಂಡು ರಾಜ್ಯಕ್ಕೆ ಕೆಟ್ಟ ಹೆಸರು ತರಲು ವ್ಯವಸ್ಥಿತ ಯತ್ನಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
“ಶಬರಿಮಲೆ ವಿವಾದದ ಸಂಪೂರ್ಣ ಲಾಭ ಗಳಿಸಲು ಬಿಜೆಪಿ ನಾಯಕರು ಹಾಗೂ ಸಚಿವರು ಅಲ್ಲಿಗೆ ಹೋಗಲು ಸರತಿಯಲ್ಲಿ ನಿಂತಿದ್ದಾರೆ. ಶಬರಿಮಲೆಯಲ್ಲಿ ಗಲಭೆ ಸೃಷ್ಟಿಸಲು ಸರಕಾರ ಯಾರಿಗೂ ಆಸ್ಪದ ನೀಡದು'' ಎಂದು ಅವರು ಪುನರುಚ್ಛರಿಸಿದ್ದಾರೆ.
ಪ್ರತಿಭಟನಾನಿರತರ ಮೇಲೆ ಪೊಲೀಸರು ರವಿವಾರ ಕೈಗೊಂಡ ಕ್ರಮವನ್ನು ಸಮರ್ಥಿಸಿದ ಅವರು, ಈ ಕ್ರಮದಿಂದಾಗಿ ಅಲ್ಲಿನ ಪರಿಸ್ಥಿತಿ ಸ್ವಲ್ಪ ತಿಳಿಗೊಂಡಿತ್ತು ಎಂದರು. ಶಬರಿಮಲೆಯಲ್ಲಿ ಈಗ ಕೈಗೊಳ್ಳಲಾಗಿರುವ ಭದ್ರತಾ ವ್ಯವಸ್ಥೆ ಮುಂದುವರಿಯುವುದು. ಗೊಂದಲ ಸೃಷಿಸಲು ಯತ್ನಿಸುವವರನ್ನು ಹದ್ದುಬಸ್ತಿನಲ್ಲಿಡಲಾಗುವುದು ಎಂದು ಅವರು ತಿಳಿಸಿದರು.
Next Story