ಉಡುಪಿ: ಜಿಪಂ ಸಿಇಒ ಆಗಿ ಸಿಂಧು ಬಿ. ಅಧಿಕಾರ ಸ್ವೀಕಾರ

ಉಡುಪಿ, ನ.20: ಉಡುಪಿ ಜಿಲ್ಲಾ ಪಂಚಾಯತ್‌ನ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ 2011ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಸಿಂಧು ಬಿ.ರೂಪೇಶ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ.
2011ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 17ನೇ ರ್ಯಾಂಕ್ ಪಡೆದಿದ್ದ ಸಿಂಧು, ರಾಜ್ಯದ ಅಭ್ಯರ್ಥಿಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಮೈಸೂರು ಮೂಲದ ಸಿಂಧು, ಮೈಸೂರಿನ ಎನ್‌ಐಇಯಿಂದ ಬಿ.ಇ (ಇಎಂಡ್‌ಸಿ) ಪದವಿ ಪಡೆದ ಬಳಿಕ ಎರಡು ವರ್ಷ ಬೆಂಗಳೂರಿನ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ದುಡಿದು, ಕೆಲಸಕ್ಕೆ ರಾಜಿನಾಮೆ ನೀಡಿ ಒಂದೇ ವರ್ಷದ ತಯಾರಿಯಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು 17ನೇ ರ್ಯಾಂಕಿನೊಂದಿಗೆ ತೇರ್ಗಡೆಗೊಂಡಿದ್ದರು ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಹಣಕಾಸು ಇಲಾಖೆ ಬಜೆಟ್ ಮತ್ತು ಸಂಪನ್ಮೂಲ ವಿಭಾಗದ ಉಪಕಾರ್ಯದರ್ಶಿಯಾಗಿದ್ದ ಸಿಂಧು ಬಿ.ರೂಪೇಶ್ ಅವರನ್ನು ಇದೀಗ ಉಡುಪಿ ಜಿಪಂ ಸಿಇಒ ಆಗಿ, ಶಿವಾನಂದ ಕಾಪಸಿ ಸ್ಥಾನದಲ್ಲಿ ನೇಮಕ ಮಾಡಲಾಗಿದೆ.
ಮಂಗಳವಾರ ಹೊಸ ಹುದ್ದೆಯ ಅಧಿಕಾರ ಸ್ವೀಕರಿಸಿದ ಸಿಂಧೂ ಬಿ. ರೂಪೇಶ್, ಉಡುಪಿಯ ಸರ್ಕ್ಯೂಟ್ ಹೌಸ್‌ನಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಭೇಟಿ ಮಾಡಿ ಶುಭ ಕೋರಿದರು.