ಹಾರ್ದಿಕ್ ಪಟೇಲ್, ಇತರ ಇಬ್ಬರ ವಿರುದ್ಧ ರಾಷ್ಟ್ರದ್ರೋಹದ ಆರೋಪ ಪಟ್ಟಿ ರಚನೆ
ಅಹ್ಮದಾಬಾದ್, ನ. 20: ರಾಷ್ಟ್ರದ್ರೋಹ ಪ್ರಕರಣಕ್ಕೆ ಸಂಬಂಧಿಸಿ ಪಾಟಿದಾರ್ ಒಬಿಸಿ ಮೀಸಲಾತಿ ಚಳವಳಿಯ ನಾಯಕ ಹಾರ್ದಿಕ್ ಪಟೇಲ್ ಅವರ ವಿರುದ್ಧ ಅಹ್ಮದಾಬಾದ್‌ನ ಸೆಷನ್ಸ್ ನ್ಯಾಯಾಲಯ ಮಂಗಳವಾರ ಆರೋಪ ಪಟ್ಟಿ ರೂಪಿಸಿದೆ. ಅವರ ಇಬ್ಬರು ಸಹೋದ್ಯೋಗಿಗಳಾದ ದಿನೇಶ್ ಬಂಭಾನಿಯಾ ಹಾಗೂ ಚಿರಾಗ್ ಪಟೇಲ್ ಅವರ ಹೆಸರನ್ನು ಕೂಡ ಈ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.
ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವ ಆಗ್ರಹ ಒಪ್ಪಿಕೊಳ್ಳಲು ಸರಕಾರದ ಮೇಲೆ ಒತ್ತಡ ಹೇರಲು ಹಿಂಸಾಚಾರಕ್ಕೆ ಉತ್ತೇಜಿಸಿದ ಆರೋಪವನ್ನು ಮೂವರೂ ಎದುರಿಸುತ್ತಿದ್ದಾರೆ. ಮೂವರು ತಾವು ತಪ್ಪು ಮಾಡಿಲ್ಲ ಎಂದು ಮನವಿ ಮಾಡಿದ್ದರು ಹಾಗೂ ಈಗ ಮೂವರು ಜಾಮೀನು ಪಡೆದುಕೊಂಡು ಹೊರಗಡೆ ಇದ್ದಾರೆ.
“ರಾಷ್ಟ್ರದ್ರೋಹದ ಆರೋಪ, ಸರಕಾರದ ವಿರುದ್ಧ ಯುದ್ಧ, ಜನರನ್ನು ಉತ್ತೇಜಿಸಿದ ಆರೋಪವನ್ನು ನಮ್ಮ ಮೇಲೆ ರೂಪಿಸಲಾಗಿದೆ. ಆದರೆ, ನಮಗೆ ನ್ಯಾಯಾಂಗದ ಬಗ್ಗೆ ನಂಬಿಕೆ ಇದೆ” ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ. ‘‘ಇದು (ಕ್ರೈಮ್ ಬ್ರಾಂಚ್) ಮುಖ್ಯಸ್ಥ ಜೆ.ಕೆ. ಭಟ್ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ. ಈ ಹಿಂದಿನ ಅಭಯ್ ಛೂಡಸಾಮ ಹಾಗೂ ಡಿ.ಜಿ. ವಂಝರಾ ಕೂಡ ಪ್ರಕರಣ ಎದುರಿಸುತ್ತಿದ್ದಾರೆ. ಆದುದರಿಂದ ನಾನು ಕ್ರೈಮ್ ಬ್ರಾಂಚ್ ಅನ್ನು ಹೇಗೆ ನಂಬಲಿ’’ ಎಂದು ಹಾರ್ದಿಕ್ ಪಟೇಲ್ ಪ್ರಶ್ನಿಸಿದ್ದಾರೆ.