ಆಟೋ ರಿಕ್ಷಾಕ್ಕೆ ಲಾರಿ ಢಿಕ್ಕಿ: ಓರ್ವ ಮೃತ್ಯು, ಐವರು ವಿದ್ಯಾರ್ಥಿಗಳಿಗೆ ಗಾಯ

ಕಾಸರಗೋಡು, ನ.21: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೋ ರಿಕ್ಷಾಕ್ಕೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಮೃತಪಟ್ಟು, ಐವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಇಂದು ಬೆಳಗ್ಗೆ ಕುನಿಯ ಎಂಬಲ್ಲಿ ನಡೆದಿದೆ.
ಮೃತಪಟ್ಟವರನ್ನು ಆಟೋ ರಿಕ್ಷಾ ಚಾಲಕ ಪೆರಿಯಾಟಡ್ಕದ ಅನ್ಸಾರ್(35) ಎಂದು ಗುರುತಿಸಲಾಗಿದೆ. ಇಂದು ಪೂರ್ವಾಹ್ನ 11 ಗಂಟೆಗೆ ರಾಷ್ಟ್ರೀಯ ಹೆದ್ದಾರಿಯ ಕುನಿಯ ಎಂಬಲ್ಲಿ ಅಪಘಾತ ನಡೆದಿದೆ. ಕುನಿಯ ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದಾಗ ಪುಣೆಯಿಂದ ಜೆಸಿಬಿ ಯಂತ್ರ ಹೇರಿಕೊಂಡು ತೆರಳುತ್ತಿದ್ದ ಲಾರಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಗಾಯಗೊಂಡ ಫಾತಿಮ್ಮತ್ ಸೈದಾ(6), ರುಬೀನಾ ಮುಹಮ್ಮದ್(6), ಸಿಯಾನ್(6), ಖದೀಜತ್ ಆಸ್ನಾ (6) ಎಂಬವರ ಸಹಿತ ಐವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಿಂದ ಆಟೋ ರಿಕ್ಷಾ ನಜ್ಜುಗುಜ್ಜಾಗಿದೆ. ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story