ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಕಾರು: ಐವರು ಮೃತ
ಹಿಸಾರ್, ನ.21: ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿ ನಿದ್ರಿಸುತ್ತಿದ್ದ ಕಾರ್ಮಿಕರ ಮೇಲೆ ಹರಿದ ಪರಿಣಾಮ ಐವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟರೆ, ಇತರ 9 ಮಂದಿ ಗಾಯಗೊಂಡಿರುವ ದಾರುಣ ಘಟನೆ ಜಿಂದಾಲ್ ಸ್ಟೀಲ್ ಪ್ಲಾಂಟ್ ಬಳಿ ಬುಧವಾರ ಬೆಳಗ್ಗಿನ ಜಾವ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟ ಕಾರ್ಮಿಕರೆಲ್ಲರೂ ಬಿಹಾರದ ಸಹರ್ಸಾ ಹಾಗೂ ಖಗಾರಿಯಾ ಜಿಲ್ಲೆಯವರು. ಘಟನೆಯು ಬುಧವಾರ ಬೆಳಗ್ಗೆ 2 ಗಂಟೆ ಸುಮಾರಿಗೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಹನ್ಸಿಯತ್ತ ತೆರಳುತ್ತಿದ್ದ ಕಾರು ಮೊದಲಿಗೆ ಮೇಲ್ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆಯಿತು. ಬಳಿಕ ಸೇತುವೆಯ ಕೆಳಗೆ ಫುಟ್ಪಾತ್ನಲ್ಲಿ ಮಲಗಿದ್ದ ಕಾರ್ಮಿಕರ ಮೈಮೇಲೆಯೇ ಹರಿದುಹೋಗಿದೆ’’ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಂದಾಲ್ ಬ್ರಿಡ್ಜ್ ಎಂದೇ ಖ್ಯಾತಿ ಪಡೆದಿರುವ ಮೇಲ್ಸೇತುವೆಯ ದುರಸ್ತಿ ಕಾರ್ಯ ನಡೆಯುತ್ತಿತ್ತು. ಇಲ್ಲಿಯೇ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕೆಲಸ ಮುಗಿಸಿ ರಾತ್ರಿ ಮಲಗಿದ್ದರು. ಅತ್ಯಂತ ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಓವರ್ಬ್ರಿಡ್ಜ್ನ ತಡೆಗೋಡೆ ಮುರಿದು 50 ಅಡಿ ಕೆಳಕ್ಕೆ ಬಿದ್ದು, ಮಲಗಿದ್ದ ಕಾರ್ಮಿಕರ ಮೇಲೆ ಹರಿದಿದೆ. ಕಾರು ಸೇತುವೆಯಿಂದ ಕೆಳಗೆ ಬೀಳುವ ಮೊದಲು ಮತ್ತೊಂದು ವಾಹನಕ್ಕೆ ಢಿಕ್ಕಿಯಾಗಿತ್ತು. ಘಟನೆಯಲ್ಲಿ ಚಾಲಕನಿಗೆ ಗಾಯವಾಗಿದೆ. ಆತನ ಜೊತೆಗಿದ್ದ ಮತ್ತಿಬ್ಬರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆಯ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.