ಉಡುಪಿ: ಜಯಮಾಲರಿಂದ ಜಿಲ್ಲಾ ಆಯುಷ್ ಆಸ್ಪತ್ರೆ ಉದ್ಘಾಟನೆ

ಉಡುಪಿ, ನ. 22: ಉಡುಪಿ ಜಿಲ್ಲಾಸ್ಪತ್ರೆ ಆವರಣದಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 10 ಹಾಸಿಗೆಗಳ ಜಿಲ್ಲಾ ಆಯುಷ್ ಆಸ್ಪತ್ರೆಯನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಬುಧವಾರ ಉದ್ಘಾಟಿಸಿದರು.
ರಾಜ್ಯ ವಲಯದ 102.50 ಲಕ್ಷ ರೂ. ಹಾಗೂ ಕೇಂದ್ರ ವಲಯದ 37.50 ಲಕ್ಷ ರೂ.ಗಳ ನೆರವಿನಿಂದ ಸುಮಾರು 50ಸೆನ್ಸ್ ಜಾಗದಲ್ಲಿ ಈ ಆಯುರ್ವೇದ ಆಸ್ಪತ್ರೆ ತಲೆ ಎತ್ತಿದ್ದು, ಇಲ್ಲಿ ಪಂಚಕರ್ಮ ಚಿಕಿತ್ಸೆ, ಹೋಮಿಯೋಪತಿ ಹಾಗೂ ಯುನಾನಿ ಪದ್ಧತಿಯಲ್ಲಿ ಹೊರರೋಗಿಗಳಿಗೆ ತಪಾಸಣೆ, ಔಷಧಿ ವಿತರಣೆ ನಡೆಯಲಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಅಲ್ಲದೇ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನೂತವಾಗಿ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಿರುವ ಸಿಟಿ ಸ್ಕಾನಿಂಗ್ ಸೆಂಟರ್ ಅಲ್ಲದೇ 85 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಶವಾಗಾರವನ್ನು ಸಹ ಸಚಿವೆ ಉದ್ಘಾಟಿಸಿದರು. ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಕಣ್ಣಿನ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದ ಡಾ.ಜಯಮಾಲ, ತ್ಯಾಜ್ಯಸಂಸ್ಕರಣೆಗಾಗಿ ಸುಮಾರು ಎಂಟು ಲಕ್ಷ ರೂ. ವೆಚ್ಚ ದಲ್ಲಿ ನಿರ್ಮಾಣಗೊಂಡ ಎಸ್‌ಎಲ್ಆರ್‌ಎಂ ಘಟಕವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ರಂಗಾಯಣ ಮತ್ತು ರಂಗಮಂದಿರ ನಿರ್ಮಾಣ ಕಾರ್ಯ ನಡೆಯಲಿದೆ. ಜಿಲ್ಲೆಯಲ್ಲಿ ರಂಗಾಯಣ ಹಾಗೂ ರಂಗ ಮಂದಿರ ನಿರ್ಮಿಸಲು ಆದಿ ಉಡುಪಿಯಲ್ಲಿ 1.37 ಸೆಂಟ್ಸ್ ಜಾಗವನ್ನು ಗುರುತಿಸಲಾಗಿದ್ದು, ಶೀಘ್ರದಲ್ಲಿ ಕಾವುಗಾರಿ ಪ್ರಾರಂಭಗೊಳ್ಳಲಿದೆ ಎಂದರು.
ಸರಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳ ಪ್ರಯೋಜನ ಪ್ರತಿ ನಾಗರಿಕರಿಗೂ ದೊರೆಯಬೇಕು. ಜಿಲ್ಲೆಯ ದ್ರವ ಮತ್ತು ಘನ ತ್ಯಾಜ್ಯ ವಿಲೇವಾರಿ ಯೋಜನೆ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು, ಬೆಂಗಳೂರಿನಂತಹ ನಗರದಲ್ಲಿ ಇದನ್ನು ಅಳವಡಿಸಿಕೊಂಡರೆ ಕಸದ ಸಮಸ್ಯೆ ಬಗೆಹರಿ ಯಲಿದೆ. ಜಿಲ್ಲೆಯಲ್ಲಿ ತ್ಯಾಜ್ಯ ವಿಲೇವಾರಿ ಕುರಿತು ಜಿಲ್ಲಾಧಿಕಾರಿಗಳು ತೆಗೆದುಕೊಂಡಿರುವ ಕ್ರಮಗಳನ್ನು ಸಚಿವರು ಅಭಿನಂದಿಸಿದರು.
ಕಾಯಕ್ರಮದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸದಸ್ಯ ಜನಾರ್ದನ ತೋನ್ಸೆ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್, ಜಿಲ್ಲಾ ಆಯುಷ್ ಅಧಿಕಾರಿ ಅಲಕಾನಂದ ರಾವ್ ಮತ್ತಿತರರು ಉಪಸ್ಥಿತರಿದ್ದರು.







