ಜಾಲತಾಣಗಳಲ್ಲಿ ಪೋಟೋ ಹಾಕುವ ಬೆದರಿಕೆ: ವಿಷ ಸೇವಿಸಿದ ಪ್ರೇಮಿಗಳು- ಪ್ರಿಯತಮ ಸಾವು

ಶಿವಮೊಗ್ಗ, ನ. 21: ಜಾಲತಾಣಗಳಲ್ಲಿ ಪೋಟೋ ಹಾಕುವ ಕಿಡಿಗೇಡಿಗಳ ಬ್ಲ್ಯಾಕ್‍ಮೇಲ್‍ಗೆ ಹೆದರಿ, ವಿಷ ಸೇವಿಸಿ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರೇಮಿಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಪ್ರಿಯತಮ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಸಂಜಯ್ (22) ಮೃತಪಟ್ಟ ಪ್ರಿಯತಮ ಎಂದು ಗುರುತಿಸಲಾಗಿದೆ. ಅಪ್ರಾಪ್ತ ವಯಸ್ಸಿನ ಪ್ರಿಯತಮೆ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಮೂಲಗಳು ಮಾಹಿತಿ ನೀಡಿವೆ. ಈ ಕುರಿತಂತೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದೆ.
ಪ್ರಕರಣದ ಹಿನ್ನೆಲೆ: ಮಂಡಘಟ್ಟ ಗ್ರಾಮದ ನಿವಾಸಿ ಮೃತ ಸಂಜಯ್ ಹಾಗೂ ಸಮೀಪದ ಗ್ರಾಮವೊಂದರ ವಾಸಿಯಾದ ಅಪ್ರಾಪ್ತ ಯುವತಿಯು, ಕಳೆದ ಕೆಲ ವರ್ಷಗಳಿಂದ ಪ್ರೇಮಿಸುತ್ತಿದ್ದರು. ಇದು ಅವರಿಬ್ಬರ ಮನೆಯವರಿಗೆ ತಿಳಿದಿರಲಿಲ್ಲ. ಇವರಿಬ್ಬರು ಜೊತೆಯಾಗಿ ಓಡಾಡುವುದನ್ನು ಸಮೀಪದ ಗ್ರಾಮದ ಕೆಲ ಕಿಡಿಗೇಡಿಗಳು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದರು.
ಈ ಪೋಟೋಗಳನ್ನು ಫೇಸ್‍ಬುಕ್, ವ್ಯಾಟ್ಸಾಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು. ಜೊತೆಗೆ ಲಕ್ಷಾಂತರ ರೂ. ನೀಡುವಂತೆಯೂ ಬ್ಲ್ಯಾಕ್‍ಮೇಲ್ ಮಾಡಿದ್ದರು ಎನ್ನಲಾಗಿದೆ. ಕಿಡಿಗೇಡಿಗಳ ಬೆದರಿಕೆಯಿಂದ ನೊಂದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಅದರಂತೆ ನ. 19 ರಂದು ತಾಲೂಕಿನ ಮಂಡಗಟ್ಟ ಬಳಿಯ ಹೊಸೂರುಮಟ್ಟಿಯ ಜಮೀನೊಂದರಲ್ಲಿ ವಿಷ ಸೇವಿಸಿದ್ದರು. ಇವರನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿ, ಆಸ್ಪತ್ರೆಗೆ ರವಾನಿಸಿದ್ದರು.
ಈ ಕುರಿತಂತೆ ಮೃತ ಯುವಕನ ತಾಯಿಯು ಪೊಲೀಸರಿಗೆ ದೂರು ನೀಡಿದ್ದು, ತಮ್ಮ ಪುತ್ರನ ಸಾವಿಗೆ ಕಾರಣಕರ್ತರಾದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದಾರೆ.







