ನ. 24: ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ನೂತನ ಕಟ್ಟಡ ಉದ್ಘಾಟನೆ

ಉಡುಪಿ, ನ.21: ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀ ಗೌರವಾಧ್ಯಕ್ಷತೆಯಲ್ಲಿರುವ ವಿದ್ಯೋದಯ ಟ್ರಸ್ಟ್‌ನ ಅಂಗಸಂಸ್ಥೆ ವಿದ್ಯೋದಯ ಪಬ್ಲಿಕ್ ಸ್ಕೂಲ್‌ಗಾಗಿ ವಾದಿರಾಜ ರಸ್ತೆಯಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡದ ಉದ್ಘಾಟನೆಯು ನ.24ರ ಸಂಜೆ 5 ಕ್ಕೆ ನಡೆಯಲಿದೆ ಎಂದು ಟ್ರಸ್ಟ್‌ನ ಕಾರ್ಯಾಧ್ಯಕ್ಷ ಎನ್.ನಾಗರಾಜ ಬಲ್ಲಾಳ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ವಿದ್ಯೋದಯ ಪಬ್ಲಿಕ್ ಸ್ಕೂಲ್ ಕಳೆದ 21 ವರ್ಷಗಳ ಅಸ್ತಿತ್ವದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಐಸಿಎಸ್‌ಇ ಕೇಂದ್ರೀಯ ಮಾದರಿಯ ಪಠ್ಯಕ್ರಮದ ಈ ಶಾಲೆಯಲ್ಲಿ ಎಲ್‌ಕೆಜಿಯಿಂದ ಎಸೆಸೆಲ್ಸಿವರೆಗೆ ಕಲಿಕೆಗೆ ಅವಕಾಶವಿದ್ದು, 2007ರ ಮೊದಲ ಬ್ಯಾಚ್‌ನಿಂದ 2018ರವರೆಗೆ ಸತತವಾಗಿ ಎಸೆಸೆಲ್ಸಿಯಲ್ಲಿ ಶೇ.100 ಫಲಿತಾಂಶದ ಸಾಧನೆ ಮಾಡಲಾಗಿದೆ ಎಂದರು.
ಉಡುಪಿಯಲ್ಲಿ ಪಣಿಯಾಡಿ ಶಾಲೆಯೆಂದೇ ಖ್ಯಾತವಾದ ಕನ್ನಡ ಮಾಧ್ಯಮದಲ್ಲಿ ನಡೆಯುತಿದ್ದ ಶ್ರೀಅನಂತೇಶ್ವರ ಹಿರಿಯ ಪ್ರಾಥಮಿಕ ಶಾಲೆ 1997ರಲ್ಲಿ ಮುಚ್ಚುವ ಸ್ಥಿತಿ ಬಂದಾಗ ಅದನ್ನು ಉಳಿಸಲೆಂದೇ ಶಾಲೆಯ ಹಳೆವಿದ್ಯಾರ್ಥಿಗಳು ಸೇರಿ ಮಾಡಿಕೊಂಡ ವಿದ್ಯೋದಯ ಟ್ರಸ್ಟ್, ಶಾಲೆಯನ್ನು ಉಳಿಸಿ, ಬೆಳೆಸುವುದರೊಂದಿಗೆ ಕೇಂದ್ರೀಯ ಪಠ್ಯಕ್ರಮದ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ್ನು ಹೊಸದಾಗಿ ಪ್ರಾರಂಭಿಸಿತು ಎಂದವರು ವಿವರಿಸಿದರು.
ಟ್ರಸ್ಟ್‌ನಡಿ ನಡೆಯುತ್ತಿರುವ ಅನಂತೇಶ್ವರ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುಣಮಟ್ಟದ ಉಚಿತ ಶಿಕ್ಷಣದೊಂದಿಗೆ 1ರಿಂದ 7ನೇ ತರಗತಿಯವರೆಗೆ ಒಟ್ಟು 400ವಿದ್ಯಾರ್ಥಿಗಳು ಕಲಿಯುತಿದ್ದಾರೆ. ಅದರೊಂದಿಗೆ ಶ್ರೀಅನಂತೇಶ್ವರ ಆಂಗ್ಲಮಾಧ್ಯಮ ಪ್ರೌಢ ಶಾಲೆ, ವಿದ್ಯೋದಯ ಪಿಯು ಕಾಲೇಜುಗಳನ್ನು ಸಹ ನಡೆಸಲಾಗುತ್ತಿದ್ದು, ಒಟ್ಟು 3,000 ವಿದ್ಯಾರ್ಥಿಗಳು ಕಲಿಯುತಿದ್ದಾರೆ. ವಿದ್ಯೋದಯ ಪಬ್ಲಿಕ್ ಸ್ಕೂಲ್ ಒಂದರಲ್ಲೇ 1,400 ವಿದ್ಯಾರ್ಥಿಗಳು ಕಲಿಯುತಿದ್ದಾರೆ ಎಂದು ನಾಗರಾಜ ಬಲ್ಲಾಳ್ ನುಡಿದರು.
ಇದೀಗ ಐದು ಎಕರೆ ಜಾಗದಲ್ಲಿ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ್ನು ಎರಡು ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ರೀತಿಯಲ್ಲಿ ಕೇಂದ್ರೀಯ ಸ್ಕೂಲ್‌ನ ಮಾರ್ಗಸೂಚಿಯಂತೆ ನಿರ್ಮಿಸಲಾಗಿದೆ. ಉಳಿದ ಮೂರು ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು. ಶಾಲಾ ಕಟ್ಟಡದಲ್ಲಿ 50 ಶಾಲಾ ಕೊಠಡಿ, ಪ್ರತ್ಯೇಕ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, 250 ಆಸನಗಳ ಹವಾನಿಯಂತ್ರಿತ ಸಭಾಂಗಣ, ಎರಡು ಮಹಡಿಯ ಲೈಬ್ರೆರಿ, ಒಳಾಂಗಣ ಕ್ರೀಡಾಂಗಣಗಳು ನಿರ್ಮಾಣಗೊಂಡಿವೆ ಎಂದರು.
ನೂತನ ಶಾಲಾ ಕಟ್ಟಡವನ್ನು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀ ಉಪಸ್ಥಿತಿಯಲ್ಲಿ ನಿಟ್ಟೆ ವಿವಿಯ ಚಾನ್ಸಲರ್ ಎನ್.ವಿನಯ ಹೆಗ್ಡೆ ಉದ್ಘಾಟಿಸಲಿ ದ್ದಾರೆ. ಅಧ್ಯಕ್ಷತೆಯನ್ನು ಮಣಿಪಾಲ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ವಹಿಸಲಿದ್ದಾರೆ. ಶಾಸಕ ಕೆ.ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕರ್ನಾಟಕ ಬ್ಯಾಂಕಿನ ಜಿಎಂ ನಾಗರಾಜ ರಾವ್ ಬಿ. ಉಪಸ್ಥಿತರಿ ರುವರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಉಸ್ತಾದ್ ಹುಮಾಯೂನ್ ಹರ್ಲಾಪುರ ಮತ್ತು ಬಳಗದಿಂದ ದಾಸವಾಣಿ ಕಾರ್ಯಕ್ರಮವಿದೆ.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಕಾರ್ಯದರ್ಶಿ ಕೆ.ಗಣೇಶ ರಾವ್, ಕೋಶಾಧಿಕಾರಿ ಯು.ಪದ್ಮರಾಜ ಆಚಾರ್ಯ, ಜೊತೆ ಕಾರ್ಯದರ್ಶಿ ರೂಪಾ ಬಲ್ಲಾಳ್, ಟ್ರಸ್ಟ್‌ಗಳಾದ ರಘುರಾಮ ಆಚಾರ್ಯ, ಯು.ದಾಮೋದರ್, ಪ್ರಾಂಶುಪಾಲೆ ಸುಧಾ ರಾವ್ ಉಪಸ್ಥಿತರಿದ್ದರು.