ಮಾಹೆಗೆ ಅಂ.ರಾ. ಗ್ರೀನ್ ಆ್ಯಪಲ್ ಸಿಲ್ವರ್ ಪ್ರಶಸ್ತಿ

ಮಣಿಪಾಲ, ನ.21: 2018ನೇ ಸಾಲಿನ ಅತ್ಯುತ್ತಮ ಪರಿಸರ ಅಭ್ಯಾಸಕ್ಕಾಗಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್, ಪ್ರತಿಷ್ಠಿತ ಅಂತಾರಾಷ್ಟ್ರೀಯ ಗ್ರೀನ್ ಆ್ಯಪಲ್ ಎವಾರ್ಡ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದೆ.
ಕಳೆದ ಸೋಮವಾರ ಲಂಡನ್‌ನ ಹೌಸ್ ಆಫ್ ಪಾರ್ಲಿಮೆಂಟ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾಹೆಯ ಪರವಾಗಿ ಪರಿಸರ ಸುಸ್ಥಿರತೆಯ ಸಹಾಯಕ ನಿರ್ದೇಶಕ ಡೆರಿಕ್ ಜೆ.ಜೋಸುವಾ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.
ವಿಶ್ವದಾದ್ಯಂತದಿಂದ ಬಂದ ಸುಮಾರು 800 ಅರ್ಜಿಗಳಲ್ಲಿ ಮಾಹೆಯನ್ನು ಬೆಳ್ಳಿ ಪದಕಕ್ಕೆ ಆಯ್ಕೆ ಮಾಡಲಾಯಿತು. ಪ್ರಶಸ್ತಿ ಗೆದ್ದು ಯೋಜನೆ ‘ಗ್ರೀನ್ ಮಣಿಪಾಲ’ಕ್ಕೆ ಆಯ್ಕೆಗಾರರಿಂದ ಭರಪೂರ ಪ್ರಶಂಸೆಯೂ ವ್ಯಕ್ತವಾಯಿತು. ಸ್ಪರ್ಧೆಯಲ್ಲಿ ಹಸಿರಿಗಾಗಿ ವೈಯಕ್ತಿಕ, ಕಂಪೆನಿಗಳಿಗೆ, ನಿಗಮಕ್ಕೆ ಹಾಗೂ ಸಮುದಾಯಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು.
ಈ ಗೆಲುವಿನೊಂದಿಗೆ ಮಾಹೆ 2019ರ ಗ್ರೀನ್ ವರ್ಲ್ಡ್ ಎವಾರ್ಡ್‌ನಲ್ಲೂ ಭಾಗವಹಿಸುವ ಅರ್ಹತೆ ಪಡೆಯಿತಲ್ಲದೇ, ಮಾಹೆ ಹೆಸರಿನಲ್ಲಿ ವಿಶ್ವಸಂಸ್ಥೆಯ ಬಿಲಿಯನ್ ಟ್ರೀಸ್ ಯೋಜನೆಯಲ್ಲಿ 100 ಮರಗಳನ್ನು ನೆಡಲಾಗುತ್ತದೆ.
ದಿ ಗ್ರೀನ್ ಆ್ಯಪಲ್ ಎನ್ವರಾಮೆಂಟ್ ಎವಾರ್ಡ್‌ನ್ನು 1994ರಲ್ಲಿ ಪರಿಸರ ಕಾಳಜಿ, ಪರಿಸರ ಸಂರಕ್ಷಣೆ ಹಾಗೂ ಪರಿಸರ ಜಾಗೃತಿ ಮೂಡಿಸಲು ಪ್ರಾರಂಭಿಸ ಲಾಯಿತು. ರಾಜಕೀಯೇತರ, ಸ್ವತಂತ್ರ, ಲಾಭರಹಿತ ಪರಿಸರ ಗುಂಪೊಂದು -ಹಸಿರು ಸಂಘಟನೆ- ಅಂತಾರಾಷ್ಟ್ರೀಯ ಮಟ್ಟದ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ.
ಈ ಪ್ರಶಸ್ತಿಯಿಂದ ಮಾಹೆಯ ಸುಸ್ಥಿರ ಶೈಕ್ಷಣಿಕ ಕ್ಯಾಂಪಸ್ ಯೋಜನೆಗೆ ಮಾನ್ಯತೆ ದೊರಕಿದಂತಾಗಿದೆ. ತ್ಯಾಜ್ಯ, ನೀರು, ಹಸಿರು ಹೊದಿಕೆ, ಸ್ವಚ್ಚ ಇಂಧನಗಳ ನಮ್ಮ ಗುರಿಗೆ ಪ್ರಸ್ತಿಯಿಂದ ಬಲ ಬಂದಂತಾಗಿದೆ ಎಂದು ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಹೇಳಿದ್ದಾರೆ.