ಮೂಡುಬಿದಿರೆ: ಪ್ರಕೃತಿ ಚಿಕಿತ್ಸಾ ದಿನಾಚರಣೆ- ಸೂರ್ಯಸ್ನಾನ

ಮೂಡುಬಿದಿರೆ, ನ. 21: ಬದಲಾಗುತ್ತಿರುವ ಆಧುನಿಕ ಜೀವನ ಪದ್ಧತಿಯಿಂದಾಗಿ ಮನುಷ್ಯ ಪ್ರಕೃತಿಯೊಂದಿಗಿನ ಸಂಬಂಧದಿಂದ ದೂರ ಸರಿಯುತ್ತಿದ್ದಾನೆ. ಜೀವಸತ್ವ `ಡಿ' ಯ ಕೊರತೆ ನಮ್ಮೆಲ್ಲನೇಕರನ್ನು ಕಾಡುತ್ತಿದೆ. ಪ್ರಕೃತಿ ಚಿಕಿತ್ಸಾ ಪದ್ಧತಿಗಳಲ್ಲೊಂದಾದ ಸೂರ್ಯಸ್ನಾನದ ಮಹತ್ವವನ್ನು ಮನಗಾಣಿಸುವುದ ಕ್ಕಾಗಿ ಪ್ರಥಮ ವರ್ಷದ ಪ್ರಕೃತಿ ಚಿಕಿತ್ಸಾ ದಿನಾಚರಣೆಯ ಅಂಗವಾಗಿ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಯೋಗ ವಿಜ್ಞಾನ ಕಾಲೇಜಿನ ಆಶ್ರಯದಲ್ಲಿ ಸಾಮೂಹಿಕ ಸೂರ್ಯ ಸ್ನಾನವನ್ನು ಆಯೋಜಿಸಲಾಗಿತ್ತು.
ಪ್ರಕೃತಿಯೊಡನೆ ಸಾಮರಸ್ಯದಿಂದಿದ್ದು ಪ್ರಕೃತಿಯ ರಕ್ಷಣೆಗೆ ಬದ್ಧರಾಗಬೇಕೆನ್ನುವ ಆಶಯದೊಂದಿಗೆ ಮಾನವ ಸರಪಳಿ ಮತ್ತುನಮ್ಮ ನಡಿಗೆ ಪ್ರಕೃತಿಯೆಡೆಗೆ ಎಂಬ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ, ಆಳ್ವಾಸ್ ಹೋಮಿಯೋಪತಿ ಕಾಲೇಜುಗಳ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ 1500 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ಕಾರ್ಯಕ್ರಮ ಉದ್ಘಾಟಿಸಿದರು. ಆಳ್ವಾಸ್ ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ಡಾ.ವನಿತಾ ಶೆಟ್ಟಿ, ಪೀಟರ್ ಫೆರ್ನಾಂಡಿಸ್, ಡಾ.ಪ್ರವೀಣ್ ರಾಜ್ ಆಳ್ವ, ಆಡಳಿತಾಧಿಕಾರಿ ಡಾ.ಪ್ರಜ್ಞಾ ಆಳ್ವಾ ಉಪಸ್ಥಿತರಿದ್ದರು. ದೀಕ್ಷಾ ಗೌಡ ಕಾರ್ಯಕ್ರಮ ನಿರ್ವಹಿಸಿದರು.