ನಿಮ್ಮ ಪಾದಗಳು ದುರ್ಗಂಧ ಬೀರುತ್ತಿವೆಯೇ? ಅದರಿಂದ ಪಾರಾಗಲು ಟಿಪ್ಸ್ ಇಲ್ಲಿವೆ
ನೀವು ಮನೆಗೆ ಮರಳಿದಾಗ ಸಾಕ್ಸ್ಗಳನ್ನು ಕಳಚಿದಾಕ್ಷಣ ಇಡೀ ಕೋಣೆಯು ದುರ್ಗಂಧದಿಂದ ತುಂಬಿಕೊಳ್ಳುತ್ತದೆಯೇ? ನೀವು ಪಾದಗಳನ್ನು ನಿಯಮಿತವಾಗಿ ತೊಳೆಯುವ ಮೂಲಕ ಅವುಗಳನ್ನು ಸ್ವಚ್ಛವಾಗಿಟ್ಟುಕೊಂಡರೂ ಕೆಟ್ಟ ವಾಸನೆ ಬೆನ್ನು ಬಿಡುತ್ತಿಲ್ಲವೇ? ಪಾದಗಳು ದುರ್ಗಂಧ ಬೀರುತ್ತವೆ ಎಂಬ ಕಾರಣಕ್ಕೆ ನಿಮ್ಮ ಸಹೋದ್ಯೋಗಿಗಳು ಅಥವಾ ಸ್ನೇಹಿತರ ಎದುರಿನಲ್ಲಿ ಶೂಗಳನ್ನು ಕಳಚಲು ಮುಜುಗರವಾಗುತ್ತಿದೆಯೇ? ಈ ಸಂಕಟದಿಂದ ಪಾರಾಗಲು ನಿಮಗಾಗಿ ಕೆಲವು ಟಿಪ್ಸ್ ಇಲ್ಲಿವೆ......
ಪಾದಗಳು ಕೆಟ್ಟ ವಾಸನೆ ಬೀರುವುದಕ್ಕೆ ಕಾರಣಗಳೇನು?
ಪಾದಗಳಲ್ಲಿ ಬೆಳೆಯುವ ಬ್ಯಾಕ್ಟೀರಿಯಾಗಳು ಬೆವರಿನೊಂದಿಗೆ ಸೇರುವುದು ಕೆಟ್ಟ ವಾಸನೆಗೆ ಕಾರಣವಾಗುತ್ತದೆೆ. ನಿಮ್ಮ ಪಾದಗಳು ದುರ್ಗಂಧ ಬೀರಲು ಇತರ ಕಾರಣಗಳೂ ಇರಬಹುದು.
-ಹೈಪರ್ಹೈಡ್ರೋಸಿಸ್: ಇದು ಅತಿಯಾದ ಬೆವರಿಕೆಯನ್ನುಂಟು ಮಾಡುವ ವಂಶವಾಹಿ ಸ್ಥಿತಿಯಾಗಿದ್ದು,ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗುತ್ತದೆ ಮತ್ತು ತನ್ಮೂಲಕ ಪಾದಗಳು ದುರ್ಗಂಧ ಬೀರುವಂತೆ ಮಾಡುತ್ತದೆ.
-ಪ್ರತಿದಿನ ಒಂದೇ ಜೊತೆ ಕಾಲುಚೀಲಗಳನ್ನು ಧರಿಸುವುದರಿಂದ ಉಂಟಾಗುವ ತೇವಾಂಶದಿಂದಾಗಿ ಬ್ಯಾಕ್ಟೀರಿಯಾಗಳು ಬೆಳೆಯಲು ಉತ್ತಮ ವೇದಿಕೆಯು ಸೃಷ್ಟಿಯಾಗುತ್ತದೆ.
- ಮುಚ್ಚಿದ ಅಥವಾ ಬಿಗಿಯಾದ ಶೂಗಳನ್ನು ಧರಿಸುವುದರಿಂದ ಪಾದಗಳ ಮೇಲೆ ಒತ್ತಡವನ್ನುಂಟು ಮಾಡುವುದಲ್ಲದೆ ಪಾದಗಳನ್ನು ಗಾಯಗಳಿಗೆ ಸುಲಭಭೇದ್ಯ ವನ್ನಾಗಿಸುತ್ತದೆ,ಜೊತೆಗೆ ಅತಿಯಾದ ಬೆವರಿನಿಂದಾಗಿ ಕೆಟ್ಟ ವಾಸನೆಯನ್ನುಂಟು ಮಾಡುತ್ತದೆ.
- ಧಗೆಯಲ್ಲಿ ಇಡೀ ದಿನದ ಕೆಲಸದ ಬಳಿಕ ಕಾಲುಚೀಲಗಳನ್ನು ದಿನವೂ ಬದಲಿಸದಿದ್ದರೆ ಅವು ಬೆವರಿನಿಂದ ತೊಯ್ದು ಒದ್ದೆಯಾಗುತ್ತವೆ ಮತ್ತು ದುರ್ವಾಸನೆಯನ್ನು ಬೀರುತ್ತವೆ,ಜೊತೆಗೆ ಪಾದಗಳಲ್ಲಿಯೂ ಕೆಟ್ಟವಾಸನೆ ಯನ್ನುಂಟು ಮಾಡುತ್ತವೆ.
- ಪ್ರತಿದಿನ ಮನೆಗೆ ಮರಳಿದ ಬಳಿಕ ಪಾದಗಳನ್ನು ನಿಯಮಿತವಾಗಿ ತೊಳೆದುಕೊಂಡು ನೈರ್ಮಲ್ಯವನ್ನು ಕಾಯ್ದುಕೊಳ್ಳದಿರುವುದು ಅವು ಕೆಟ್ಟ ವಾಸನೆಯನ್ನು ಬೀರಲು ಕಾರಣವಾಗುತ್ತದೆ.
►ಕೆಟ್ಟ ವಾಸನೆಯಿಂದ ಪಾರಾಗುವುದು ಹೇಗೆ?
ನಿಮ್ಮ ಪಾದಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ನೀವು ಘನಂದಾರಿ ಕೆಲಸವನ್ನೇನೂ ಮಾಡಬೇಕಿಲ್ಲ ಅಥವಾ ಫೂಟ್ ಸ್ಪ್ರೇಗಳನ್ನು ಬಳಸಬೇಕಿಲ್ಲ. ಈ ಸ್ಪ್ರೇಗಳು ನಿಮ್ಮ ಜೇಬಿಗೆ ತೂತು ಉಂಟುಮಾಡುತ್ತವೆಯಷ್ಟೇ ಹೊರತು ಅವುಗಳಿಂದ ಶಾಶ್ವತ ಪರಿಹಾರ ದೊರೆಯುವುದಿಲ್ಲ. ಇದರ ಬದಲಾಗಿ ನೀವು ಕೆಲವು ಸರಳ ಟಿಪ್ಸ್ ಅನುಸರಿಸಿದರೆ ಸಾಕು.
1) ನಿಮ್ಮ ಪಾದಗಳನ್ನು ಬ್ಯಾಕ್ಟೀರಿಯಾ ನಿರೋಧಕ ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳುವುದನ್ನು ರೂಢಿಸಿಕೊಳ್ಳಿ. ನಿಮ್ಮ ಪಾದದ ಬೆರಳುಗಳ ನಡುವಿನ ಜಾಗವು ಬೆವರು ಮತ್ತು ಬ್ಯಾಕ್ಟೀರಿಯಾಗಳಿಗೆ ಆಶ್ರಯ ನೀಡುವುದರಿಂದ ಅದನ್ನು ಚೆನ್ನಾಗಿ ಸ್ವಚ್ಛಗೊಳಿಸಿ.
2) ಪಾದಗಳನ್ನು ತೊಳೆದ ಬಳಿಕ ಶುಭ್ರವಾದ ಟವೆಲ್ನಿಂದ ಅವುಗಳನ್ನು ಮತ್ತು ಬೆರಳು ಸಂದಿಗಳನ್ನು ಸರಿಯಾಗಿ ಒರೆಸಿಕೊಳ್ಳಿ.
3)ಸಾಧ್ಯವಾದಷ್ಟು ಮಟ್ಟಿಗೆ ಪ್ರತಿದಿನವೂ ಒಂದೇ ಜೊತೆ ಶೂಗಳನ್ನು ಧರಿಸಬೇಡಿ. ಒಮ್ಮೆ ಬಳಸಿದ ಬಳಿಕ ಅವುಗಳನ್ನು ಕನಿಷ್ಠ 24 ಗಂಟೆಗಳ ಕಾಲ ಗಾಳಿಯಾಡಲು ಬಿಡಿ.
4) ಮುಚ್ಚಿದ ಮತ್ತು ಬಿಗಿಯಾದ ಶೂಗಳು ಕೆಟ್ಟ ವಾಸನೆಯ ಅಪಾಯವನ್ನು ಹೆಚ್ಚಿಸುವುದರಿಂದ ಅವುಗಳ ಬಳಕೆಯನ್ನು ತಪ್ಪಿಸಿ. ಗಾಳಿಯಾಡಲು ಅವಕಾಶವಿರುವ ಮತ್ತು ಬೆವರು ಸಂಗ್ರಹಗೊಳ್ಳುವುದನ್ನು ತಡೆಯುವ ತೆರೆದ ಶೂಗಳನ್ನು ಮತ್ತು ಸ್ಯಾಂಡಲ್ಗಳನ್ನು ಬಳಸಿದರೆ ಒಳ್ಳೆಯದು.
5) ಶೂಗಳನ್ನು ಬೆವರು ಮತ್ತು ತೇವಾಂಶದಿಂದ ಮುಕ್ತಗೊಳಿಸಲು ಅವುಗಳನ್ನು ಆಗಾಗ್ಗೆ ಬಿಸಿಲಿನಲ್ಲಿಡಿ. ನಿಮ್ಮ ಶೂಗಳನ್ನು ತೆರೆದ ಜಾಗದಲ್ಲಿಡುವುದರಿಂದ ಅದು ಅವುಗಳಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಕೆಟ್ಟ ವಾಸನೆಯನ್ನು ತಡೆಯಲು ನೆರವಾಗುತ್ತದೆ.
6) ಬೆವರನ್ನು ತಡೆಯಲು ಮತ್ತು ನಿಮ್ಮ ಪಾದಗಳನ್ನು ಒಣ,ಸ್ವಚ್ಛ ಮತ್ತು ವಾಸನೆಮುಕ್ತವಾಗಿರಿಸಲು ಲಿಂಬೆ ರಸ,ಬೇಕಿಂಗ್ ಸೋಡಾ,ಅಲೋವೆರಾ ಅಥವಾ ಟಾಲ್ಕಂ ಪೌಡರ್ಗಳಂತಹ ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ.
ಕೆಟ್ಟವಾಸನೆ ಬೀರುವ ಪಾದಗಳು ಇತರ ಅನಾರೋಗ್ಯ ಸ್ಥಿತಿಯನ್ನೂ ಸೂಚಿಸಬಹುದು. ಈ ಟಿಪ್ಸ್ ಬಳಸಿಯೂ ನಿಮ್ಮ ಪಾದಗಳು ದುರ್ಗಂಧ ಬೀರುವುದು ನಿಲ್ಲದಿದ್ದರೆ ವೈದ್ಯರ ಸಲಹೆ ಪಡೆದುಕೊಳ್ಳಿ.
ಅಲ್ಲದೆ ಕೆಟ್ಟ ವಾಸನೆಯೊಂದಿಗೆ ನಿಮ್ಮ ಪಾದಗಳಲ್ಲಿ ತುರಿಕೆ ಅಥವಾ ನೋವು ಇದ್ದರೆ ವೈದ್ಯರನ್ನು ಭೇಟಿಯಾಗುವುದು ಜಾಣತನವಾಗುತ್ತದೆ.